ಬೆಂಗಳೂರು: ಬಿಜೆಪಿ ನೂತನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನವದೆಹಲಿಯಿಂದ ಸಿಹಿ ಸುದ್ದಿ ತರುತ್ತಾರೆ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರೀಕ್ಷೆ ಹುಸಿಯಾಗಿದೆ. ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ ಎಳೆಯದೆ ರಾಜ್ಯ ಉಸ್ತುವಾರಿ ಹಿಂದಿರುಗಿದ್ದು ಸಚಿವಾಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.
ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ರಾಜ್ಯಕ್ಕೆ ಮೊದಲ ಭೇಟಿ ನೀಡಿದ್ದ ಅರುಣ್ ಸಿಂಗ್ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ, ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಇಂದು ಬೆಂಗಳೂರಿನಲ್ಲಿ ಪ್ರಮುಖರ ಸಭೆ ನಡೆಸಿದರು. ಪಕ್ಷದ ಕಚೇರಿಯಲ್ಲಿ ಆಯ್ದ ಶಾಸಕರು, ಸಂಸದರು ಮತ್ತು ಸಚಿವರು ಭಾಗವಹಿಸಿದ್ದರು.
ಈ ವೇಳೆ ಕೆಲ ನಾಯಕರು ದೂರುಗಳ ಪಟ್ಟಿಯನ್ನು ನೀಡಿದ್ದಾರೆ. ಪಕ್ಷ ಹಾಗು ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎನ್ನುವ ಮಾಹಿತಿಗಳನ್ನು ನೀಡಿದ್ದಾರೆ. ಶಾಸಕರ ಸಭೆ ನಡೆದಿಲ್ಲ, ಅನುದಾನ ಸರಿಯಾಗಿ ನೀಡುತ್ತಿಲ್ಲ, ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ನೇಮಕಾತಿ ವೇಳೆ ಪಕ್ಷದ ಸಲಹೆ ಪರಿಗಣಿಸಿಲ್ಲ ಎನ್ನುವ ದೂರುಗಳನ್ನು ಅರುಣ್ ಸಿಂಗ್ ಗೆ ನೀಡಿದ್ದು ಇದನ್ನೆಲ್ಲಾ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಓದಿ:ರಾಜ್ಯ ಉಸ್ತುವಾರಿ-ಸಿಎಂ ಭೇಟಿ ಅಂತ್ಯ: ಮುಂದುವರಿದ ಸಂಪುಟ ವಿಸ್ತರಣೆ ಕುತೂಹಲ
ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಅರುಣ್ ಸಿಂಗ್ ಪರಿಗಣಿಸಿದ್ದು, ಈ ಬಗ್ಗೆ ವಿಸ್ತೃತ ಮಾತುಕತೆ ನಡೆಸಬೇಕಿದೆ. ದೆಹಲಿಗೆ ಬನ್ನಿ ಎಂದು ಶಾಸಕರೊಬ್ಬರಿಗೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.