ಬೆಂಗಳೂರು :ಸಚಿವ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎರಡು ಹಂತದ ಚರ್ಚೆಗೆ ಮುಂದಾಗಿದ್ದಾರೆ. ಸಂಘ ಪರಿವಾರ, ಸಿಎಂ, ರಾಜ್ಯ ನಾಯಕರು ಮತ್ತು ಪ್ರಮುಖ ಸಚಿವರ ಜೊತೆ ಮಾತುಕತೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ಮಾಹಿತಿ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂಜಾನೆಯೇ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಾಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದರು. ಆರ್ಎಸ್ಎಸ್ ನಾಯಕರ ಜತೆ ಕೆಲಕಾಲ ಸಮಾಲೋಚನೆ ನಡೆಸಿದರು. ಸಂಘಟನೆ ಮತ್ತು ಸರ್ಕಾರದ ಕುರಿತು ಕೆಲ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ನಂತರ ಬಿಜೆಪಿ ಕಚೇರಿಯಲ್ಲಿ ಸಚಿವರೊಂದಿಗೆ ಅರುಣ್ ಸಿಂಗ್ ಪ್ರತ್ಯೇಕ ಮಾತುಕತೆ ನಡೆಸಿದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಡಿಸಿಎಂ ಅಶ್ವತ್ಥ್ ನಾರಾಯಣ್, ಕಂದಾಯ ಸಚಿವ ಆರ್ ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, ಸಂಪುಟ ವಿಸ್ತರಣೆ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.