ಬೆಂಗಳೂರು: ಪದೇ ಪದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ
ನೋಟಿಸ್ ಜಾರಿ ಮಾಡಲಾಗಿದ್ದು, ಸೂಕ್ತ ಸಮಯದಲ್ಲಿ ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋ ಕಾಲ್ಡ್ ಎಂಎಲ್ಎ ನೇಚರ್ ಎಲ್ಲರಿಗೂ ಗೊತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ರಿಜೆಕ್ಟ್ ಮಾಡುತ್ತೇನೆ. ಅವರು ಏನೇ ಮಾತಾಡಿದರೂ ಅದು ತಪ್ಪು, ಬಹಳ ವರ್ಷಗಳಿಂದ ಎಲ್ಲರೂ ಅವರನ್ನು ನೋಡಿದ್ದಾರೆ. ಸುಳ್ಳು ಹೇಳಿಕೆಗಳನ್ನ ಮಾಧ್ಯಮಗಳ ಮುಂದೆ ಕೊಡುತ್ತಿದ್ದಾರೆ. ಯತ್ನಾಳ್ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವು ಎಂದರು.
ಇಂತಹ ಗಂಭೀರ ಆರೋಪ ಮಾಡಿರುವ ಕಾರಣದಿಂದಲೇ ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಯತ್ನಾಳ್ ನೀಡಿರುವ ಉತ್ತರವನ್ನು ರಾಷ್ಟ್ರೀಯ ಬಿಜೆಪಿ ಶಿಸ್ತು ಸಮಿತಿ ಪರಿಶೀಲಿಸುತ್ತದೆ. ಈ ವಿಚಾರದಲ್ಲಿ ಸೂಕ್ತ ಸಮಯದಲ್ಲಿ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.