ಬೆಂಗಳೂರು:ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಏನಾದರು ಹೇಳಿ ಪಕ್ಷಕ್ಕೆ ತೊಂದರೆಯಾಗುವಂತೆ ಮಾಡುವುದಿಲ್ಲ. ನಾನು ಪ್ರಧಾನಿ ಆದಾಗ ಏನು ಕೆಲಸ ಮಾಡಿದ್ದೆ ಎನ್ನುವುದನ್ನು ಲೋಕಸಭೆಯಲ್ಲಿ ಮಾತನಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಇಲ್ಲಿನ ಜೆ.ಪಿ.ಭವನದ ಪಕ್ಷದ ಕಚೇರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದಾಗ ಐದು ಬಾರಿ ಕಾಶ್ಮೀರಕ್ಕೆ ಹೋಗಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ. ಯಾವುದೇ ಗಲಾಟೆಗೆ ಆಸ್ಪದ ಕೊಡದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ಈಗ ಕ್ಲೀನ್ ಕಾಶ್ಮೀರ್, ಕ್ಲೀನ್ ಇಂಡಿಯಾ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾನು ಇನ್ನೂ ಐದು ವರ್ಷ ಇರುತ್ತೇನೆ ಎಂಬ ಭಾವನೆ ಇದೆ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ನಡೆಗೆ ಕುಟುಕಿದ್ದಾರೆ.
ಇನ್ನು ಕುಮಾರಸ್ವಾಮಿ ಅವರು ಪ್ರವಾಹಪೀಡಿತ ಭಾಗಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ವೈಮಾನಿಕ ಸರ್ವೆ ಮಾಡೋಕೆ ಹೇಳುತ್ತೇನೆ ಎಂದು ಉತ್ತರ ಕರ್ನಾಟಕದ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.