ಬೆಂಗಳೂರು :ಆರ್ಮಿ ಕಮ್ಯಾಂಡೋ ವೇಷ ಧರಿಸಿ ರಾಜಸ್ಥಾನದ ಬಾರ್ಮೆರ್ ಮಿಲಿಟರಿ ಸ್ಟೇಷನ್ನಿನ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್ಐ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಯುವಕನನ್ನು ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೊ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದ ಜಿತೇಂದರ್ ಸಿಂಗ್ ಎಂಬಾತ ಬಂಧಿತ ಆರೋಪಿ.
ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿಯನ್ನ ಬಂಧಿಸಿ ನಕಲಿ ಆರ್ಮಿ ಡ್ರೆಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಜಿತೇಂದರ್ ಸಿಂಗ್ ಮೂಲತಃ ರಾಜಸ್ತಾನದ ಬಾರ್ಮೆರ್ ಮೂಲದವನು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಬಟ್ಟೆ ವ್ಯಾಪಾರ ಮಾಡುತ್ತಿದ್ದ.
ಮಿಲಿಟರಿ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಇರುವ ಫೋಟೋಗಳನ್ನು ನಿರಂತರವಾಗಿ ಪಾಕಿಸ್ತಾನದ ಐಎಸ್ಐ ಅಧಿಕಾರಿಗೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಇಂಟಿಲಿಜೆನ್ಸ್ ಆಫ್ ಬ್ಯೂರೋ (ಐಬಿ), ಜಿತೇಂದರ್ ಮೊಬೈಲ್ ಟ್ರ್ಯಾಕ್, ಲೊಕೇಷನ್ ಸರ್ಚ್ ಮಾಡಿದಾಗ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಐಬಿ, ಕಾಟನ್ ಪೇಟೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಿದ್ದ ಜಿತೇಂದರ್ಗೆ, ಪಾಕಿಸ್ತಾನದ ಐಎಸ್ಎ ಅಧಿಕಾರಿ ಯುವತಿ ಸೋಗಿನಲ್ಲಿ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿರುವುದು ಯುವತಿ ಎಂದು ನಂಬಿ ಸ್ನೇಹ ಬೆಳೆಸಿದ್ದ ಜಿತೇಂದರ್.
ಯುವತಿ ಸೋಗಿನಲ್ಲಿದ್ದ ಐಎಸ್ಎ ಅಧಿಕಾರಿ ನನಗೆ ಭಾರತವೆಂದರೆ ತುಂಬಾ ಇಷ್ಟ, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಫೋಟೋಗಳಿದ್ದರೆ ಕಳುಹಿಸು ಎಂದಿದ್ದಾನೆ. ಇದಕ್ಕೆ ಸಮ್ಮತಿ ಸೂಚಿಸಿದ್ದ ಈತ, ಇದಕ್ಕಾಗಿ ಕಮಾಂಡರ್ ವೇಷ ಧರಿಸಿ ಸೇನಾನೆಲೆಗಳ ಬಳಿ ಹೋಗಿ ಫೋಟೋಗಳನ್ನು ಸೆರೆ ಹಿಡಿದು ಶೇರ್ ಮಾಡುತ್ತಿದ್ದ.
ಸೇನಾ ಸಮವಸ್ತ್ರದಲ್ಲಿ ಇದ್ದಿದ್ದರಿಂದ ಸುಲಭವಾಗಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಈ ಬಗ್ಗೆ ಅರಿತಿದ್ದ ಮಿಲಿಟರಿ ಇಂಟೆಲಿಜೆನ್ಸ್ ಸೇನಾ ನೆಲೆಗಳ ಶೋಧ ನಡೆಸಿದಾಗ ಫೇಸ್ ಬುಕ್ ಮುಖಾಂತರ ಫೋಟೋಗಳು ಸೋರಿಕೆ ಆಗುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ, ನಕಲಿ ಫೇಸ್ ಬುಕ್ ಅಕೌಂಟ್ಗೆ ಫೋಟೋಗಳು ಶೇರ್ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಮತ್ತೊಂದೆಡೆ ಫೋಟೋ ಕಳುಹಿಸುತ್ತಿದ್ದ ವ್ಯಕ್ತಿಯ ಜಾಡು ಹಿಡಿದ ಮಿಲಿಟರಿ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಆರೋಪಿ ಇರುವುದು ಗೊತ್ತಾಗಿತ್ತು.
ಮಿಲಿಟರಿ ಅಧಿಕಾರಿಗಳ ಮಾಹಿತಿ ಪಡೆದ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಿಲಿಟರಿ ಕಮಾಂಡರ್ ಸೋಗಿನಲ್ಲಿ ಕೆಲ ತಿಂಗಳ ಹಿಂದಷ್ಟೇ ಸೇನಾ ನೆಲೆಗಳ ಕುರಿತಂತೆ ಫೋಟೋ ಕಳುಹಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು.