ಬೆಂಗಳೂರು: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಪಿಸ್ತೂಲ್ ತೋರಿಸಿ ನಗರದೆಲ್ಲೆಡೆ ಮನೆ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಇಬ್ಬರು ನಟೋರಿಯಸ್ ಖದೀಮರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಷೀರ್ ಆಲಿಯಾಸ್ ಸಮ್ಮು ಹಾಗೂ ಆಸೀಫ್ ವುಲ್ಲಾ ಎಂಬ ಬಂಧಿತರಿಂದ 65 ಲಕ್ಷ ಮೌಲ್ಯದ 1.2 ಕೆಜಿ ಚಿನ್ನದ ಒಡವೆ, 5 ಕೆ.ಜಿ. ಬೆಳ್ಳಿ, ಒಂದು ಕಾರು, 3 ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟೋರಿಯಸ್ ರೌಡಿಶೀಟರ್ ಬಾಂಬೆ ಸಲೀಂ ಸಹೋದರನಾಗಿರುವ ಬಷೀರ್ ಹಾಗೂ ಸಹಚರ ಆಸೀಫ್ ಕೆ.ಜಿ.ಹಳ್ಳಿ ನಿವಾಸಿಗಳಾಗಿದ್ದಾರೆ.
ಅಕ್ರಮ ಸಂಪಾದನೆಗಾಗಿ ಮನೆಗಳ್ಳತನ ಕೃತ್ಯಕ್ಕೆ ಇಳಿದಿದ್ದ ಆರೋಪಿಗಳು, ಕಳೆದ ಮೂರು ವರ್ಷಗಳಿಂದ ಕಳ್ಳತನ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಕಳ್ಳತನ ಮಾಡಿದ ಕಾರಿನಲ್ಲಿ ಬಂದು ಪಿಸ್ತೂಲ್ ತೋರಿಸಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದರು. ಆರೋಪಿಗಳ ಬಂಧನದ ನಂತರ ಬೆಂಗಳೂರು, ಕೋಲಾರ, ಹಾಸನ ಹಾಗೂ ಬೆಳಗಾವಿ ಸೇರಿದಂತೆ 18 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಇಬ್ಬರು ಕಳ್ಳರನ್ನು ಬಂಧಿಸಿದ ಪೊಲೀಸರು ಕಳ್ಳತನ ಹೇಗೆ ಮಾಡುತ್ತಿದ್ದರು?
2018ರಲ್ಲಿ ಕಳ್ಳತನ ಮಾಡಿದ್ದ ಕಾರಿನಲ್ಲಿ ಊರು ಸುತ್ತುತ್ತಿದ್ದ ಆರೋಪಿಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳನ್ನ ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಅಲ್ಲದೇ ಬೀಗ ಹಾಕಿರುವ ಮನೆಗಳನ್ನೇ ಗುರುತಿಸಿಕೊಂಡು ಮನೆಗಳವು ಮಾಡುತ್ತಿದ್ದರು. ಒಂದು ವೇಳೆ ಮನೆ ಮಾಲೀಕ ಅಥವಾ ಯಾರಾದರೂ ಬಂದರೆ ಪಿಸ್ತೂಲ್ ತೋರಿಸಿ ಬೆದರಿಸಿ ಮನೆಯಲ್ಲಿದ್ದ ನಗ-ನಾಣ್ಯ ದೋಚುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಇವರು ಪೊಲೀಸರಿಂದ ತಲೆಮರೆಸಿಕೊಂಡೇ ಇದ್ದರು.
ನಕಲಿ ಮೀಡಿಯಾ ಕಾರ್ಡ್ ಬಳಕೆ:
ಪೊಲೀಸರನ್ನು ಯಮಾರಿಸಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದ ಅರೋಪಿಗಳು, ಖಾಸಗಿ ಸುದ್ದಿ ವಾಹಿನಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ತಯಾರಿಸಿಕೊಂಡು ಕಾರಿನಲ್ಲಿ ಓಡಾಡುತ್ತಿದ್ದರು. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಪ್ರಶ್ನಿಸಿದರು ಮಾಧ್ಯಮದವರು ಎಂದು ಹೇಳಿ ಎಸ್ಕೇಪ್ ಆಗುತ್ತಿದ್ದರು.
ಕಳೆದ ಕೆಲ ದಿನಗಳ ಹಿಂದೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಹೋದಾಗ ಮನೆ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಆಗ ಮನೆ ಮಾಲೀಕನ ಮೇಲೆ ಅಟ್ಯಾಕ್ ಮಾಡಿ ಅಲ್ಲಿಂದ ಎಸ್ಕೇಪ್ ಅಗಿದ್ದರು. ಆರೋಪಿಗಳು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಗಿಕೊಂಡಿರುವ ಮಾಹಿತಿ ಪಡೆದ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಹಾಗೂ ಸಬ್ ಇನ್ ಸ್ಪೆಕ್ಟರ್ ನಾಗರಾಜ್ ನೇತೃತ್ವದ ತಂಡ ಈ ಖತರ್ನಾಕ್ ಕಳ್ಳರನ್ನು ಬಂಧಿಸಿದೆ.