ಬೆಂಗಳೂರು:ತಮಿಳುನಾಡಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅಂಬರ್ ಗ್ರಿಸ್ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಿರುಚಿ ಮೂಲದ ಸೆಲ್ವರಾಜ್ (34) ಹಾಗೂ ಹರಿಹರನ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 6.5 ಕೆಜಿ ತೂಕದ ಅಂಬರ್ ಗ್ರಿಸ್ ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನಿಂದ ಬೆಂಗಳೂರಿಗೆ ಅಂಬರ್ ಗ್ರಿಸ್ ತಂದಿದ್ದ ಆರೋಪಿಗಳು, ವಿ.ವಿ ಪುರಂ ಬಳಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಏನಿದು ಅಂಬರ್ ಗ್ರಿಸ್ ? ಇದರ ಬಳಕೆ ಎಲ್ಲಿ:ಅಂಬರ್ ಗ್ರಿಸ್ ಅಥವಾ ತೇಲುವ ಚಿನ್ನ ಎಂದು ಕರೆಯಲ್ಪಡುವ ಇದನ್ನು ತಿಮಿಂಗಿಲಗಳು ಉತ್ಪತಿ ಮಾಡುತ್ತವೆ. ವಾಸ್ತವದಲ್ಲಿ ಇದು ತಿಮಿಂಗಿಲಗಳ ವೀರ್ಯವಾಗಿದೆ. ಆದರೆ, ತಿಮಿಂಗಿಲಗಳು ಇದನ್ನ ಬಾಯಿ ಮುಖಾಂತರ ಬಿಡುಗಡೆ ಮಾಡುವುದರಿಂದ ಇದನ್ನು ವೇಲ್ ವಾಮಿಟಿಂಗ್ ಎಂದು ಸಹ ಕರೆಯುತ್ತಾರೆ. ಅಂಬರ್ ಗ್ರಿಸ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಕೆ ಮಾಡುವುದರಿಂದ ಸುವಾಸನೆ ಹೆಚ್ಚು ಮತ್ತು ದೀರ್ಘವಾಗಿರುತ್ತದೆ ಎನ್ನಲಾಗುತ್ತದೆ.
ಅದೇ ಕಾರಣದಿಂದಾಗಿಯೇ ಪ್ರಾಚೀನ ಈಜಿಪ್ಟ್ ಕಾಲದಿಂದ ಇಂದಿನ ಖ್ಯಾತನಾಮ ಸುಗಂಧ ದ್ರವ್ಯ ಕಂಪನಿಗಳು ಅಂಬರ್ ಗ್ರಿಸ್ಗಾಗಿ ಕೋಟಿ ಕೋಟಿ ಕೊಟ್ಟು ಖರೀದಿಸುತ್ತವೆ. ಆದರೆ, ಅಂಬರ್ ಗ್ರಿಸ್ ಅನ್ನ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅಳಿವಿನಂಚಿನಲ್ಲಿರುವ ನೈಸರ್ಗಿಕ ಸಂಪನ್ಮೂಲ ಎಂದು ಘೋಷಿಸಿರುವ ಕಾರಣ ಇದರ ಮಾರಾಟ ಹಾಗೂ ಸರಬರಾಜು ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ.