ಬೆಂಗಳೂರು:ಅರವತ್ತಕ್ಕೂ ಅಧಿಕ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಅಹ್ಮದ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರದ ವಿವಿಧೆಡೆ ಮನೆಗಳ್ಳತನ, ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ಮಾಡಿದ್ದ ಆರೋಪಿಗಳು, ಕೋಲಾರದ ಗಲ್ ಪೇಟ್ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಇವರು ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಹೊರಡುತ್ತಿದ್ದ ಅರೋಪಿಗಳು ಎಲ್ಲಿಯೂ ಒಂದು ಕಡೆ ನಿಲ್ಲದೇ ಒಂದೊಂದು ಊರು ಅಲೆದಾಡಿ ಹೋದ ಊರುಗಳಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು. ಪ್ರಕರಣವೊಂದರಲ್ಲಿ ಪೀಣ್ಯ ಪೊಲೀಸರಿಂದ ಬಂಧಿತನಾಗಿದ್ದ ಫಯಾಜ್ ಅಹ್ಮದ್ ಒಂದು ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಸದ್ಯ ಇಬ್ಬರೂ ಅರೋಪಿಗಳನ್ನು ಬಂಧಿಸಿರುವ ಹೆಣ್ಣೂರು ಠಾಣಾ ಪೊಲೀಸರು ಬಂಧಿತರಿಂದ ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿದ 695 ಗ್ರಾಂ ಚಿನ್ನಾಭರಣ, ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಫುಡ್ ಡೆಲಿವರಿ ಸೋಗಿನಲ್ಲಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು : ಫುಡ್ ಡೆಲಿವರಿ ನೆಪದಲ್ಲಿ ಮನೆಗಳನ್ನ ಗುರುತಿಸಿಕೊಂಡು ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ನೇಪಾಳ ಮೂಲದ ಮೂವರು ಕಳ್ಳರನ್ನ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕಡಕಾ, ಶಂಕರ್ ಥಾಪಾ, ಹಾಗೂ ಕರಣ್ ಧಮೆನಾ ಬಂಧಿತ ಆರೋಪಿಗಳು.