ಬೆಂಗಳೂರು: ಟೆಕ್ನಾಲಜಿ ಮೂಲಕ ಸ್ಮಾರ್ಟ್ ಆಗಿ ಹೈ-ಎಂಡ್ ಕಾರುಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಹೈಟೆಕ್ ಖದೀಮನನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ ಅರುಣ್ ಬಂಧಿತ ಖತರ್ ನಾಕ್ ಖದೀಮ.
ಜೈಲಲ್ಲೇ ಕಳ್ಳತನಕ್ಕೆ ಶಿಕ್ಷಣ: ಬಿ.ಕಾಂ ಪದವೀಧರನಾಗಿರುವ ಆರೋಪಿ ಇದೇ ಆಧಾರದ ಮೇಲೆ ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ, ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜು ಮಸ್ತಿಗೆ ಕಂಡುಕೊಂಡಿದ್ದ ಅಡ್ಡ ದಾರಿಯೇ ಕಳ್ಳತನ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಖದೀಮ ಅರುಣ್ ಗೆ ಸೆರೆಮನೆಯಲ್ಲಿ ಕೈದಿಯೋರ್ವನ ಪರಿಚಯವಾಗಿತ್ತು. ಆತನಿಂದ ತಂತ್ರಜ್ಞಾನ ಬಳಸಿ ಕಾರು ಹೇಗೆ ಕದಿಯುವುದು ಎಂಬುದನ್ನು ಕರಗತ ಮಾಡಿಕೊಂಡಿದ್ದ. ಇದರಂತೆ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ನಂತರ ಅದೇ ರೀತಿಯ ಡಿವೈಸ್ ಒಂದನ್ನು ತೆಗೆದುಕೊಂಡು ಕಾರುಗಳನ್ನು ಕದಿಯುತ್ತಿದ್ದ.
ಕಾರ್ ಕಳ್ಳತನ ಮಾಡುತ್ತಿದ್ದದ್ದು ಹೇಗೆ?: ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುತ್ತಿದ್ದ ಈತ ವೃತ್ತಿಯಲ್ಲಿ ಮೆಕಾನಿಕ್ ಆಗಿಯೂ ಕೆಲಸ ಮಾಡ್ತಿದ್ದ. ಈತ ಕಳ್ಳತನ ಮಾಡೋದಕ್ಕೆ Xtool auto Diagnostic ಎಂಬ ಸಾಧನ ಒಂದನ್ನು ಬಳಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಈ ಸಾಧನವನ್ನು ಕಾರಿಗೆ ಕನೆಕ್ಟ್ ಮಾಡಿ ಅದರ ಜೊತೆಯಲ್ಲಿ ತನ್ನ ಬಳಿಯಿದ್ದ ನಕಲಿ ಕೀಯನ್ನು ಕಾರಿಗೆ ಕನೆಕ್ಟ್ ಮಾಡಿ ಕಾರನ್ನೇ ಎಗರಿಸುತ್ತಿದ್ದ.