ಬೆಂಗಳೂರು:ವಿಚ್ಚೇದನ ಪಡೆದು ದೂರವಾಗೋಣ ಎಂದು ನಿರ್ಧರಿಸಿದ್ದ ದಂಪತಿಯ ನಡುವೆ ಜಗಳ ನಡೆದು ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ. ಮಜಿದ್ ಬಂಧಿತ. ಕೋಲ್ಕತ್ತಾ ಮೂಲದ ಮೊನಿಷ್ ಎಂಬಾಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಫೆ.7ರಂದು ಮನೆಯಲ್ಲಿ ಪತ್ತೆಯಾಗಿತ್ತು.
ಪತ್ನಿಯ ಮೇಲೆ ಸಂಶಯದಿಂದಲೇ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಆರು ವರ್ಷಗಳ ಹಿಂದೆ ಮದುವೆಯಾಗಿದ್ದು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ವರ್ತೂರಿನ ಪಂಚಮುಖಿ ದೇವಸ್ಥಾನ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಮಜೀದ್ ಟೈಲ್ಸ್ ಕೆಲಸ ಮಾಡುತ್ತಿದ್ದರೆ, ಪತ್ನಿ ಮೊನಿಷ್ ಗೃಹಿಣಿಯಾಗಿದ್ದಳು.
ಕೆಲ ದಿನಗಳ ಹಿಂದೆ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ವಿಚ್ಚೇದನ ಪಡೆಯುವ ಬಗ್ಗೆ ಮಾತನಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದಾದ ನಂತರವೂ ಪತಿ-ಪತ್ನಿ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿ ಪತಿ ಪತ್ನಿಯನ್ನು ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಎರಡು ದಿನಗಳ ನಂತರ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದರೋಡೆ ಪ್ರಕರಣ:ಪೊಲೀಸರ ಸಮವಸ್ತ್ರ ಧರಿಸಿ ಚಿನ್ನದ ವ್ಯಾಪಾರಿಯಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಅರುಣ್ ಹಾಗೂ ಮಂಜು ಬಂಧಿತ ಆರೋಪಿಗಳು.
ಫೆ.7ರಂದು ತಮಿಳುನಾಡಿನ ಸುಂದರಂ ಎಂಬಾತ ತನ್ನ ಮಾಲೀಕನ ಸೂಚನೆಯಂತೆ ಶಿವಮೊಗ್ಗದಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್ ಪಡೆದು ತಮಿಳುನಾಡಿಗೆ ಮರಳುತ್ತಿದ್ದರು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ತಮಿಳುನಾಡಿನ ಬಸ್‌ನಲ್ಲಿ ಕುಳಿತಿದ್ದರು. ಅಷ್ಟರಲ್ಲಿ ಪೊಲೀಸರ ಸಮವಸ್ತ್ರ ಧರಿಸಿ ಬಸ್ ಹತ್ತಿದ್ದ ಆರೋಪಿಗಳು, ಸುಂದರಂ ಕೈನಲ್ಲಿದ್ದ ಬ್ಯಾಗ್ ಪಡೆದು ಪರಿಶೀಲಿಸಬೇಕು ಎಂದಿದ್ದರು. ಬಳಿಕ ತಮ್ಮ ಕಾರಿನಲ್ಲಿ ಸ್ವಲ್ಪ ದೂರದವರೆಗೆ ಕರೆದೊಯ್ದು ಬ್ಯಾಗಿನಲ್ಲಿದ್ದ ಚಿನ್ನದ ಬಿಸ್ಕತ್ ಹಾಗೂ 6 ಲಕ್ಷ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಗಾಬರಿಗೊಂಡ ಸುಂದರಂ ತನ್ನ ಮಾಲೀಕನ ಸೂಚನೆ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಾಗರಾಜ್ ಕೆಎಸ್‌ಆರ್‌ಟಿಸಿಯಲ್ಲಿ ಹೋಂ ಗಾರ್ಡ್ ಆಗಿದ್ದು, ಆತನಿಗೆ ಸಾಥ್ ನೀಡಿದ್ದ ಆಟೋ ಚಾಲಕರಾದ ಅರುಣ್ ಹಾಗೂ ಮಂಜು ಎಂಬಾತನನ್ನ ಸಹ ಬಂಧಿಸಲಾಗಿದೆ.
ಇದನ್ನೂ ಓದಿ:ಚೆನ್ನೈ: ಆಭರಣ ಮಳಿಗೆಯಿಂದ 9 ಕೆಜಿ ಚಿನ್ನ, ₹20 ಲಕ್ಷದ ವಜ್ರ ಕಳ್ಳತನ