ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೆಂಗಳೂರು: ಯುವತಿಯ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರಿ ಅಲಿಯಾಸ್ ನರಹರಿ ಬಂಧಿತ ಆರೋಪಿ. ಬೊಮ್ಮನಹಳ್ಳಿಯ ಎನ್.ಆರ್.ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಹರಿ, ಲಾಡ್ಜ್ಗೆ ಬರುವ ಗ್ರಾಹಕರ ಫೋನ್ ನಂಬರ್ ಪಡೆಯುತ್ತಿದ್ದ. ಬಳಿಕ ಹುಡುಗಿಯರ ಹೆಸರಿನಲ್ಲಿ ಮೆಸೇಜ್ ಮಾಡಿ, ಅವರಿಂದ ಖಾಸಗಿ ಫೋಟೋ ಪಡೆದು, ಅದೇ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಇದೇ ರೀತಿ ವ್ಯಕ್ತಿಯೊಬ್ಬರನ್ನು ಅನಿತಾ ಎಂಬ ಹೆಸರಿನಲ್ಲಿ ಸಂಪರ್ಕಿಸಿದ್ದ ಆರೋಪಿ, ಅನೈತಿಕ ಸಂಬಂಧದ ಸಂದೇಶ ಕಳುಹಿಸಿದ್ದ. ನಂತರ ಆ ಸಂದೇಶಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಹಂತ ಹಂತವಾಗಿ ಒಟ್ಟು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಉತ್ತರ ವಿಭಾಗದ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಅನಿತಾ ಎಂಬ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್ ಖಾತೆಯನ್ನು ಕ್ರಿಯೇಟ್ ಮಾಡಿದ್ದ. ಆ ಖಾತೆಗೆ ಹುಡುಗಿಯ ಭಾವಚಿತ್ರವನ್ನು ಬಳಕೆ ಮಾಡಿಕೊಂಡು ದೂರುದಾರರೊಂದಿಗೆ ಚಾಟ್ ಮಾಡಿದ್ದಲ್ಲದೇ, ಆತನ ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದ. ನಂತರ ಆತನ ಫೋಟೋವನ್ನು ಮಾರ್ಫ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ, 1.10 ಲಕ್ಷದ ಹಣ ವಸೂಲಿ ಮಾಡಿದ್ದ.
ನಂತರ ಅದೇ ಹಣವನ್ನು ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಎಟಿಎಂ ಮೂಲಕ ಡ್ರಾ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ. ಈ ರೀತಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಡೆದ ಹಣಕಾಸಿನ ವಹಿವಾಟಿನಿಂದ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಇದನ್ನೂ ಓದಿ:ಉದ್ಯಮಿ ಅಪಹರಿಸಿ ಸುಲಿಗೆ: ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಸೆರೆ