ಬೆಂಗಳೂರು: ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಟಿಎಂನ್ನೇ ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ದಿಪೋಂಕರ್ ನೋಮೋಸುಂದರ್ (23) ಬಂಧಿತ ಆರೋಪಿ.
ವಿಲ್ಸನ್ ಗಾರ್ಡನ್‌ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಈತ ಎಟಿಎಂಗೆ ಹಣ ತುಂಬಿಸಲು ಬರುವ ಕಸ್ಟೋಡಿಯನ್ ಸಿಬ್ಬಂದಿಯ ವಿಶ್ವಾಸ ಗಳಿಸಿದ್ದ. ಹಣ ಹಾಕಲು ಬರುತ್ತಿದ್ದವರು ಬಳಸುವ ಐಡಿ ಹಾಗೂ ಪಾಸ್‌ವರ್ಡ್ ತಿಳಿದುಕೊಂಡಿದ್ದ. ಅದೇ ಐಡಿ, ಪಾಸ್‌ವರ್ಡ್ ಬಳಸಿ 19.96 ಲಕ್ಷ ರೂ ದೋಚಿ ಅಸ್ಸಾಂನ ಚಪರ್ ಮುಖ್ ಜಿಲ್ಲೆಗೆ ಹೋಗಿ ತಲೆಮರೆಸಿಕೊಂಡಿದ್ದ.
ತನಿಖೆ ವೇಳೆ ಆರೋಪಿಯು ಅಸ್ಸಾಂನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಆಕೆಯೊಂದಿಗೆ ಮದುವೆಯಾಗಿ ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾನೆ. ಕದ್ದ ಹಣದಲ್ಲಿ ಒಂದು ಹೋಟೆಲ್ ತೆರೆದು, ಒಂದು ವರ್ಷ ದುಡಿದು ನಂತರ ಪ್ರೀತಿಸಿದ್ದ ಯುವತಿಯ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ಕಳ್ಳತನದ ದೃಶ್ಯಗಳನ್ನು ಆಧರಿಸಿದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಅಸ್ಸಾಂಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. 14.20 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಪತಿ ಪೊಲೀಸರ ವಶಕ್ಕೆ