ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಶೆಡ್ನಲ್ಲಿ ವಾಸವಾಗಿದ್ದ 12 ವರ್ಷದ ಬಾಲಕನನ್ನು ಸಾಯಿಸಿ ಬಳಿಕ ಆತನ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಗಾದಿಲಿಂಗಪ್ಪ ಬಂಧಿತ ಆರೋಪಿಯಾಗಿದ್ದು, ಈತ ಡಿ.16 ರಂದು ಬಾಲಕ ರಾಜುನನ್ನು ಕತ್ತು ಹಿಸುಕಿ ಸಾಯಿಸಿದ್ದ. ಬಳಿಕ ಆತನ ತಾಯಿ ಹನುಮಂತವ್ವಳ ತಲೆ ಮೇಲೆ ಕಲ್ಲು ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಜ್ಞಾನಗಂಗಾ ನಗರದ ನಿರ್ಮಾಣ ಹಂತದ ಕಟ್ಟಡದ ಶೆಡ್ವೊಂದರಲ್ಲಿ ದಂಪತಿ ಬಸವರಾಜ್ ಮತ್ತು ಹನುಮಂತವ್ವ ವಾಸವಾಗಿದ್ದರು. ಬಳ್ಳಾರಿಯ ಶಿರುಗುಪ್ಪ ಮೂಲದ ಹನುಮಂತವ್ವ ಹಾಗೂ ಬಸವರಾಜ ದಂಪತಿ ಕೆಲ ವರ್ಷಗಳಿಂದ ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಎರಡು ದಿನಗಳ ಹಿಂದಷ್ಟೇ ಬಸವರಾಜ ಊರಿಗೆ ಹೋಗುವುದಾಗಿ ಹೇಳಿದ್ದ.
ಓದಿ:ಮಗನಿಂದ ಹಲ್ಲೆಗೊಳಗಾದ ತಂದೆ: ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಈ ವೇಳೆ ಬಸವರಾಜ್ಗೆ ಪರಿಚಯವಾಗಿದ್ದ ಆರೋಪಿ ಗಾದಿ ಲಿಂಗಪ್ಪ ಮನೆಗೆ ಬಂದು ಹೋಗುತ್ತಿದ್ದ. ಮನೆಯಲ್ಲಿ 40 ಗ್ರಾಂ ಚಿನ್ನಾಭರಣ ಇರುವುದನ್ನು ಗಮನಿಸಿದ್ದನು. ಈ ಹಿನ್ನೆಲೆ ಆರೋಪಿ ಡಿ.16 ರಂದು ಬಸವರಾಜ್ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಹನುಮಂತವ್ವ ನಿರಾಕರಿಸಿದ್ದಾಳೆ. ಇದರಿಂದ ಅಸಮಾಧಾನಗೊಂಡು ಅಲ್ಲೇ ಇದ್ದ ಕಲ್ಲಿನಿಂದ ಆಕೆಯ ಮೇಲೆ ಹಾಕಿದ್ದಾನೆ. ಬಳಿಕ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕ ರಾಜುನನ್ನು ಕಂಡು ಪೊಲೀಸರ ಬಳಿ ಈ ವಿಷಯ ಬಾಯ್ಬಿಡುತ್ತಾನೆ ಎಂದು ಹೆದರಿ ಕತ್ತು ಹಿಸುಕಿ ಸಾಯಿಸಿ ಕಾಲ್ಕಿತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಎರಡು ಲಕ್ಷ ರೂ.ನೀಡಿದ ಇನ್ಸ್ಪೆಕ್ಟರ್
ಮಾರಣಾಂತಿಕ ಹಲ್ಲೆಗೊಳಗಾಗಿರುವ ಹನುಮಂತವ್ವಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಲ್ಲೇಟಿನಿಂದ ಮುಖ ಹಾಗೂ ಕಣ್ಣಿನ ಭಾಗಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ಞಾನಭಾರತಿ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಆಕೆಯ ಶಸ್ತ್ರ ಚಿಕಿತ್ಸೆಗೆಂದು 2 ಲಕ್ಷ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ.