ಬೆಂಗಳೂರು:ಅರ್ಧ ಬೆಲೆಗೆ ಯುಎಇ ಕರೆನ್ಸಿ ಕೊಡುವುದಾಗಿ ಕಲರ್ ಜೆರಾಕ್ಸ್ ಕಾಪಿ ಕೊಟ್ಟು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಇಮ್ರಾನ್ ಶೇಕ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿಯಾಗಿರುವ ಪಶ್ಚಿಮ ಬಂಗಾಳ ಮೂಲದ ರುಕ್ಸಾನ ಪರಾರಿಯಾಗಿದ್ದಾಳೆ.
ಉದ್ಯಮಿಗಳು ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಈ ಜೋಡಿ ''ತಮ್ಮ ಬಳಿ ಸಾಕಷ್ಟು ಯುಎಇ ಕರೆನ್ಸಿ ಇದೆ. ಆದರೆ ಎಲ್ಲವನ್ನೂ ಎಕ್ಸ್‌ಚೇಂಜ್ ಮಾಡಲು ಸಾಧ್ಯವಿಲ್ಲವಾದ್ದರಿಂದ ಮಾರಾಟ ಮಾಡಲು ನಿರ್ಧರಿಸಿದ್ದೇವೆ'' ಎನ್ನುತ್ತಿದ್ದರು. ಭಾರತೀಯ ಕರೆನ್ಸಿಯಲ್ಲಿ ಯುಎಇನ ಒಂದು ದಿರ್ಹಾಮ್ ಬೆಲೆ ಸರಿಸುಮಾರು 22 ರೂಪಾಯಿ. ಆದರೆ ತಮಗೆ 12 ರೂಪಾಯಿಯಂತೆ ಎಕ್ಸ್‌ಚೇಂಜ್ ಮಾಡಲು ಸಿದ್ಧವೆಂದು, ನಂಬಿಕೆ ಗಳಿಸಲು ಮೊದಲಿಗೆ ಒಂದು ಅಸಲಿ ದಿರ್ಹಾಮ್ ಕೊಟ್ಟು ಕಳಿಸುತ್ತಿದ್ದರು. ಹಣ ಪಡೆದವರು ಅಧಿಕೃತ ಮನಿ ಎಕ್ಸ್‌ಚೇಂಜ್ ಸೆಂಟರಿನಲ್ಲಿ ಪರಿಶೀಲಿಸಿದಾಗ ಅಸಲಿ ಎಂದು ಹೇಳುತ್ತಿದ್ದಂತೆ ಒಂದಷ್ಟು ಹಣ ಸಿದ್ಧಮಾಡಿಕೊಂಡು ಇಮ್ರಾನ್ನನ್ನು ಭೇಟಿ ಮಾಡುತ್ತಿದ್ದರು. ಹಣ ಪಡೆಯುತ್ತಿದ್ದ ಇಮ್ರಾನ್, ಕಲರ್ ಜೆರಾಕ್ಸ್ ನೋಟುಗಳನ್ನು ಆರೋಪಿಗಳ ಕೈಗಿಟ್ಟು ಎಸ್ಕೇಪ್ ಆಗುತ್ತಿದ್ದ.
ವಂಚನೆ ಪ್ರಕರಣ ಬೆನ್ನತ್ತಿದ್ದ ಸಿಸಿಬಿ ಪೊಲೀಸರು, ಆರೋಪಿ ಇಮ್ರಾನ್ ಶೇಕ್ನನ್ನು ಬಂಧಿಸಿ, ಬಂಧಿತನಿಂದ ಸುಮಾರು ನೂರಕ್ಕೂ ಹೆಚ್ಚು ನಕಲಿ ಯುಎಇ ದಿರ್ಹಾಮ್ ಅನ್ನು ವಶಕ್ಕೆ ಪಡೆದಿದ್ದಾರೆ. ಇಮ್ರಾನ್ ಜೊತೆಗಿದ್ದ ರುಕ್ಸಾನ ಮತ್ತಷ್ಟು ನಕಲಿ ಕರೆನ್ಸಿಯೊಂದಿಗೆ ಎಸ್ಕೇಪ್ ಆಗಿದ್ದು, ಆಕೆಯ ಪತ್ತೆಗೂ ಬಲೆ ಬೀಸಲಾಗಿದೆ. ಘಟನೆ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.