ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, 2019 ರಲ್ಲಿ ಸುಮಾರು 100 ಕೆಜಿಗೂ ಅಧಿಕ ಗಾಂಜಾ ಪತ್ತೆಯಾಗಿದೆ.
ಕಾಲೇಜು, ಪ್ರತಿಷ್ಠಿತ ಸಂಸ್ಥೆಗಳು ಹೀಗೆ ನಾನಾ ಕಡೆಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಪೊಲೀಸರು ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದ್ರು ಕೂಡ ದಿನದಿಂದ ದಿನಕ್ಕೆ ಗಾಂಜಾ ಮಾರಾಟ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಹೈಡ್ರೋ ಗಾಂಜಾ, ಡ್ರಗ್ ಮಾಫಿಯಾ ಹೀಗೆ ನಾನಾ ಬಗೆಯ ಗಾಂಜಾ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈಡ್ರೋ ಗಾಂಜಾ ಅತಿ ಹೆಚ್ಚು ಪತ್ತೆ:
ಸಿಸಿಬಿ ಪೊಲೀಸರು ಕೆನಡಾ ಹಾಗೂ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಹಾಗೂ ಅದರ ಬೀಜಗಳನ್ನು ತಂದು ಮನೆಯಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿಗಳ ತಂಡಗಳನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ದರು. ಬಂಧಿತರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದರು. ಕಳವಳಕಾರಿ ವಿಷಯ ಅಂದ್ರೆ ಇದನ್ನೆಲ್ಲಾ ಆರೋಪಿಗಳು ಆನ್ಲೈನ್ ನಲ್ಲಿ ವಿದ್ಯಾರ್ಥಿಗಳಿಗೆ, ಪ್ರತಿಷ್ಠಿತ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದರು.
ಪರಪ್ಪನ ಅಗ್ರಹಾರ ಜೈಲಿಗೆ ಮಹಿಳೆ ಮೂಲಕ ರವಾನೆ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಂಡು ಕಂಬಿ ಹಿಂದೆ ಇದ್ರೂ ಹೇಗೋ ಮಾಡಿ ಹೊರಗಿನವರಿಂದ ಕೆಲ ಖೈದಿಗಳು ಜೈಲಿನೊಳಕ್ಕೆ ಗಾಂಜಾ ತರಿಸುತ್ತಿದ್ದರು. ಇದೇ ತಿಂಗಳ 4 ರಂದು ಪರಪ್ಪನ ಅಗ್ರಹಾರಕ್ಕೆ ಮಹಿಳೆಯೊಬ್ಬಳು ಗಾಂಜಾ ತೆಗೆದುಕೊಂಡು ಹೋಗಿದ್ದಾರೆ. ಇದನ್ನ ಗಮನಿಸಿದ ಅಲ್ಲಿನ ಸಿಬ್ಬಂದಿ ಮಹಿಳೆಯನ್ನ ತಡೆದು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ.ಇನ್ನೂ ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ 11 ಜನ ಖೈದಿಗಳನ್ನ ಕೂಡ ಪತ್ತೆ ಹಚ್ಚಿದ್ದಾರೆ.ಅಂದಹಾಗೆ ಮಹಿಳೆ ತನ್ನ ಸಂಬಂಧಿಕರ ಭೇಟಿಗೆಂದು ಜೈಲಿಗೆ ಹೋಗಿ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ 500 ಗ್ರಾಂ ಗಾಂಜಾವನ್ನ ನೀಡಿದ್ದಳು. ಹೀಗಾಗಿ ಜೈಲಿಗೆ ಗಾಂಜಾ ಸಪ್ಲೈ ಆಗ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಸಿಸಿಬಿ ದಾಳಿ ಕೂಡ ಮಾಡಿತ್ತು..