ಬೆಂಗಳೂರು: ಬೈಕ್ ಸವಾರನ ಪ್ರಾಣಕ್ಕೆ ಕಂಟಕನಾಗಿದ್ದ ತಮಿಳುನಾಡು ಮೂಲದ ಕಾರು ಚಾಲಕ ಹಾಗೂ ಅಪರಾಧಿಯನ್ನು 14 ವರ್ಷಗಳ ಬಳಿಕ ವಿಜಯನಗರ ಸಂಚಾರಿ ಪೊಲೀಸರು (Vijayanagar Traffic Police)ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ತಿರ್ಪುರ್ ಮೂಲದ ಮತಿವಣ್ಣನ್ ಬಂಧಿತ ಅಪರಾಧಿ. ಅಪಘಾತ ಸಂಬಂಧ ಸ್ಥಳೀಯ ನ್ಯಾಯಾಲಯ 2007ರಲ್ಲಿ ಒಂದು ವರ್ಷ ಜೈಲುಶಿಕ್ಷೆ ಪ್ರಕಟಿಸುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ನಿರಂತರ ಶೋಧ ನಡೆಸಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. ಸತತ ಪ್ರಯತ್ನ ನಡೆಸಿದ್ದ ವಿಜಯನಗರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಂಜುನಾಥ್, ಕಾನ್ಸ್ಟೇಬಲ್ಗಳಾದ ಪ್ರಕಾಶ್ ಹಾಗೂ ರತ್ನದೀಪ್ ಅಂತಿಮವಾಗಿ ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ವಿವರ:
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಮತಿವಣ್ಣನ್ 2005ರಲ್ಲಿ ಅಕ್ಟೋಬರ್ನಲ್ಲಿ ಕಾರು ಮಾಲೀಕನ ಸೂಚನೆ ಮೇರೆಗೆ ಪರಿಚಯಸ್ಥರನ್ನು ಬೆಂಗಳೂರಿಗೆ ತಂದು ಬಿಟ್ಟಿದ್ದ. ಆಗ ಮತ್ತೇ ತಮಿಳುನಾಡಿಗೆ ಹೋಗುವಾಗ ವಿಜಯನಗರದ ಮಾರೇನಹಳ್ಳಿ ಬಳಿ ಬೈಕ್ ಸವಾರನಿಗೆ ತನ್ನ ಇನೋವಾ ಕಾರಿನಿಂದ ಅಪಘಾತವೆಸಗಿದ್ದ. ಈ ಸಂಬಂಧ ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು. ಕೆಲ ತಿಂಗಳ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ.
ಅಪಘಾತ ಪ್ರಕರಣ ಸಂಬಂಧ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೂ ಆರೋಪಿ ಹಾಜರಾಗುತ್ತಿದ್ದ. ಅಪಘಾತವೆಸಗಿ ಎರಡು ವರ್ಷಗಳ ಬಳಿಕ ಅಂದರೆ 2007ರಲ್ಲಿ ನ್ಯಾಯಾಲಯದಲ್ಲಿ ಆರೋಪಿ ಮತಿವಣ್ಣನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದರಿಂದ ಒಂದು ವರ್ಷ ಜೈಲುಶಿಕ್ಷೆ ಪ್ರಕಟಿಸಿತ್ತು. ಆ ದಿನ ಆತ ವಿಚಾರಣೆಗೆ ಹಾಜರಾಗಿರಲಿಲ್ಲ. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.
14 ವರ್ಷಗಳ ಬಳಿಕ ಸೆರೆ:
ಆರೋಪ ಸಾಬೀತಾಗಿ 14 ವರ್ಷ ಕಳೆದರೂ ಆರೋಪಿ ಬಂಧನ ಪೊಲೀಸರ ಪಾಲಿಗೆ ತಲೆನೋವಾಗಿತ್ತು. ಸತತ ಪ್ರಯತ್ನದಿಂದ ಅಂತಿಮವಾಗಿ ಪೊಲೀಸರು ತಿರ್ಪುರ್ನಲ್ಲಿ ಆತನನನ್ನು ಬಂಧಿಸಿದ್ದಾರೆ.