ಬೆಂಗಳೂರು: ಪಾರ್ಟ್ಟೈಮ್ ಜಾಬ್ ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ಹಂತ ಹಂತವಾಗಿ ಹಣ ಪಡೆದು ವಂಚಿಸುತ್ತಿದ್ದ ಜಾಲ ಬೇಧಿಸಿರುವ ನಗರದ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ನಾಲ್ವರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಸೈಯದ್ ಯೂನಸ್, ಮೊಹಮ್ಮದ್ ಕಲೀಮುಲ್ಲಾ, ಸೈಯ್ಯದ್ ಅರ್ಬಾಜ್ ಹಾಗೂ ಇಬ್ರಾಹಿಂ ಕಲೀಂ ಬಂಧಿತ ಆರೋಪಿಗಳು.
ಏನಿದು ಪ್ರಕರಣ?:ವಂಚನೆಗೊಳಗಾದ ಸಾವಂತ್ ಪೂಜಾರಿ ಎಂಬುವರು ಫೇಸ್ಬುಕ್ ನೋಡುವಾಗ ಆನ್ಲೈನ್ ಶಾಪಿಂಗ್ ಆ್ಯಪ್ವೊಂದರಲ್ಲಿ ಪಾರ್ಟ್ ಟೈಮ್ ವರ್ಕ್ ಫ್ರಂ ಹೋಮ್ ಕೆಲಸ ಇರುವುದನ್ನು ಗಮನಿಸಿ ಲಿಂಕ್ ಒತ್ತಿದ್ದರು. ಯೂಸರ್ ಐಡಿ, ಪಾರ್ಸ್ ವರ್ಡ್ ರಚಿಸಿಕೊಂಡಿದ್ದಕ್ಕೆ ಅವರಿಗೆ ಬೋನಸ್ ರೂಪದಲ್ಲಿ 100 ರೂ. ಆರೋಪಿಗಳು ಕಳುಹಿಸಿದ್ದರು. ಬಳಿಕ ಟೆಲಿಗ್ರಾಮ್ ಗ್ರೂಪ್ ರಚಿಸಿ ಫ್ಲಿಪ್ ಕಾರ್ಟ್ ಮಾಲ್ ಇಂಡಿಯಾದಲ್ಲಿ ಪ್ರಾಡಕ್ಟ್ ಖರೀದಿಸುವಂತೆ ವಿವಿಧ ಟಾಸ್ಕ್ ನೀಡಿದ್ದರು. ಅದೇ ರೀತಿ, 88 ಸಾವಿರ ರೂಪಾಯಿ ಮೌಲ್ಯ ವಸ್ತುಗಳ ಖರೀದಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಹಣ ನೀಡದೇ ಆರೋಪಿಗಳು ವಂಚಿಸಿದ್ದರು.
ಈ ಸಂಬಂಧ ಸಾವಂತ್ ಪೂಜಾರಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಂ.ಮಲ್ಲಿಕಾರ್ಜುನ್ ಹಾಗೂ ಪಿಎಸ್ಐ ರಮಣ್ ಗೌಡ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ ಆರೋಪಿಗಳ 30 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದು, ಅದರಲ್ಲಿದ್ದ 60 ಲಕ್ಷ ರೂಗಳನ್ನು ಸೀಜ್ ಮಾಡಿ, ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್, ಎರಡು ಬ್ಯಾಂಕ್ ಪಾಸ್ ಬುಕ್ ವಶಕ್ಕೆ ಪಡೆದಿದ್ದರು. ಪ್ರಕರಣದ ಮೊದಲ ಆರೋಪಿ ಹುಸೇನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳು ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರು.
ಜಪ್ತಿಯಾದ ಬ್ಯಾಂಕ್ ಖಾತೆಯಲ್ಲಿ ಇದುವರೆಗೂ 40 ಕೋಟಿ ರೂ. ವಹಿವಾಟು ನಡೆದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿತರ ಬ್ಯಾಂಕ್ ಖಾತೆಯಲ್ಲಿದ್ದ 60 ಲಕ್ಷ ಮಾತ್ರ ಸೀಜ್ ಮಾಡಲಾಗಿದ್ದು, ಇನ್ನುಳಿದ ಹಣದ ಬಗ್ಗೆ ಆರೋಪಿಗಳು ಬಾಯಿ ಬಿಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಗೆ ಮಾಡುತ್ತಿದ್ದರು ವಂಚನೆ?:ತಲೆಮರೆಸಿಕೊಂಡಿರುವ ಮುಂಬೈ ಮೂಲದ ಹುಸೇನ್, ಬೆಂಗಳೂರಿನಲ್ಲಿ ಕೆಲ ತಿಂಗಳು ವಾಸವಾಗಿದ್ದ. ಈ ವೇಳೆ ಆರೋಪಿ ಶಿವಾಜಿನಗರ ಸೈಯದ್ ಯೂನಸ್ ನನ್ನು ಪರಿಚಯಿಸಿಕೊಂಡಿದ್ದ. ಒಂದು ಬ್ಯಾಂಕ್ ಖಾತೆ ಮಾಡಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದ. ಇದರಿಂದ ಪ್ರೇರಣೆಗೊಂಡ ಸೈಯದ್ ಸಹಚರರನ್ನು ಜೋತೆಗೆ ಸೇರಿಸಿಕೊಂಡು ವ್ಯವಸ್ಥಿತವಾಗಿ ನಗರದ ಐದಾರು ಕಡೆಗಳಲ್ಲಿ ಅಂಗಡಿಗಳನ್ನ ಬಾಡಿಗೆ ಪಡೆದಿದ್ದರು. ಆರೋಪಿತ ಇಬ್ರಾಹಿಂ ಕಲೀಂ ಶಿವಾಜಿನಗರದಲ್ಲಿ ಸಿಮ್ ಮಾರಾಟಗಾರನಾಗಿದ್ದ. ಆ್ಯಕ್ಟಿವೇಷನ್ ಸಿಮ್ ನೀಡಿದರೆ ಸಿಮ್ವೊಂದಕ್ಕೆ 500 ರೂಪಾಯಿ ನೀಡುವುದಾಗಿ ಆರೋಪಿಗಳು ಡೀಲ್ ಮಾಡಿಕೊಂಡಿದ್ದರು. ಇದರಂತೆ ಸಿಮ್ ಖರೀದಿಗೆ ಬರುವ ಸಾರ್ವಜನಿಕರನ್ನ ಯಾಮಾರಿಸಿ ಅವರಿಂದ ಪ್ರಿಂಗರ್ ಪ್ರಿಂಟ್ ಪಡೆದು ಆ್ಯಕ್ಟಿವೇಷನ್ ಮಾಡಿಸುತ್ತಿದ್ದ. ಸಾರ್ವಜನಿಕರು ಬ್ಯಾಂಕ್ಗೆ ಆರೋಪಿಗಳೇ ಸೃಷ್ಟಿಸಿದ ಇಮೇಲ್ ಐಡಿ, ಹೊಸ ಸಿಮ್ ನಂಬರ್ಗಳನ್ನು ನೀಡಿ ಖಾತೆ ತೆರೆಯುತ್ತಿದ್ದರು. ಅಕೌಂಟ್ ಓಪನ್ ಆಗುತ್ತಿದ್ದಂತೆ ಹುಸೇನ್ಗೆ ನೀಡುತ್ತಿದ್ದರು. ಪ್ರತಿಯಾಗಿ ಹುಸೇನ್ ಅಕೌಂಟ್ವೊಂದಕ್ಕೆ 50 ಸಾವಿರ ರೂ. ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರ ಜತೆಗೆ ಆರೋಪಿಗಳು ಲೋನ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಬ್ಯಾಂಕ್ಗೆ ಬೇಕಾದ ದಾಖಲಾತಿಗಳನ್ನ ಪಡೆಯುತ್ತಿದ್ದರು. ಅಲ್ಲದೇ ಒಂದು ಬ್ಯಾಂಕ್ ಅಕೌಂಟ್ ಮಾಡಿಸಿದರೆ 5ರಿಂದ 10 ಸಾವಿರ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಹಣದ ವ್ಯಾಮೋಹಕ್ಕೆ ಬಿದ್ದ ಸಾರ್ವಜನಿಕರು ವಂಚಕರು ಕೇಳಿದ ದಾಖಲಾತಿಗಳನ್ನ ನೀಡುತ್ತಿದ್ದರು. ನಂತರ ಆರೋಪಿಗಳು ದಾಖಲಾತಿಗಳನ್ನ ಬಳಸಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು.
ರಾಜ್ಯದಲ್ಲಿ ಸೈಬರ್ ವಂಚಕರ ವಿರುದ್ಧ 35 ಪ್ರಕರಣಗಳು ದಾಖಲು:ಮತ್ತೊಂದು ತಂಡ ಸಾರ್ವಜನಿಕರಿಗೆ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ನಂಬಿಸಿ, ಹಣದ ಆಮಿಷವೊಡ್ಡಿ ಹಂತ - ಹಂತವಾಗಿ ಹಣ ಪಡೆದು ವಂಚಿಸುತ್ತಿದ್ದರು. ಈ ವಂಚನೆಗೆ ಸೂತ್ರದಾರಿಯೇ ಹುಸೇನ್ ಈತನ ನೇತೃತ್ವದ ಮತ್ತೊಂದು ತಂಡವು ವಂಚನೆ ಜಾಲದಲ್ಲಿ ತೊಡಗಿಸಿಕೊಂಡಿತ್ತು. ಯೂಟ್ಯೂಬ್ ವಿಡಿಯೋಗಳಿಗೆ ಲೈಕ್, ಷೇರು ಮಾಡಿದರೆ ಪ್ರಾಥಮಿಕ ಹಂತದಲ್ಲಿ 500 ರೂಪಾಯಿ ಕೊಡುತ್ತಿದ್ದರು. ಹಂತ - ಹಂತವಾಗಿ ವಿವಿಧ ರೀತಿಯಾಗಿ ಟಾಸ್ಕ್ ನೀಡಿ ಜನರನ್ನ ನಂಬಿಸುತ್ತಿದ್ದರು. ಆರಂಭದಲ್ಲಿ ಆರೋಪಿಗಳು ಹಣ ಹಾಕುತ್ತಿದ್ದರು. ಹೂಡಿಕೆ ಮಾಡಿದರೆ ಅಥವಾ ಕೆಲ ವಸ್ತುಗಳು ಖರೀದಿಸಿದರೆ ಹೆಚ್ಚು ಹಣ ಸಿಗಲಿದೆ ಎಂದು ಹೇಳಿ ಅವರಿಂದ ಹಣ ಹೂಡಿಕೆ ಮಾಡಿ ಹಣ ವಂಚಿಸುತ್ತಿದ್ದರು. ಕಳೆದ ನಾಲ್ಕು ತಿಂಗಳಿಂದ ದೇಶದಲ್ಲಿ ವಂಚಕರ ವಿರುದ್ಧ 301 ಪ್ರಕರಣಗಳ ದಾಖಲಾದರೆ ಈ ಪೈಕಿ 35 ಪ್ರಕರಣಗಳು ಕರ್ನಾಟದಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:₹15 ಕೋಟಿ ಮೌಲ್ಯದ ಡ್ರಗ್ಸ್ ಸಾಗಣೆ.. ಇಬ್ಬರ ಬಂಧನ