ಆನೇಕಲ್:ಕೆನಡಾ ದೇಶದಿಂದ ಪೇಪರ್ (ಎಲ್ಎಸ್ಡಿ) ಶೀಟ್ ಡ್ರಗ್ಸ್ ತರಿಸಿದ್ದ ಸ್ಪರ್ಶ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
22 ವರ್ಷದ ಅರುಣ್ ಆಂತೋಣಿ ಬಂಧಿತ ಆರೋಪಿ. ಈತ ಮೂಲತಃ ಕೇರಳದ ಪರಂಬಾಡಿ ಚೇರಾ ಹೌಸ್ನ ಕೊಟ್ಟಾಯಂ ನಿವಾಸಿಯಾಗಿದ್ದು ಆನೇಕಲ್ ತಾಲೂಕಿನ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಸ್ಪರ್ಶ ಆಸ್ಪತ್ರೆಯ ಎಕ್ಸರೇ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ. ಕೆನಡಾದಲ್ಲಿ ಸಿಗುವ ಎಲ್ಎಸ್ಡಿ ಎಂಬ ಹಾಳೆಯ ಆಕಾರದಲ್ಲಿರುವ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ಸ್ಪರ್ಶ ಆಸ್ಪತ್ರೆಯ ತನ್ನ ವಿಭಾಗದ ವಿಳಾಸಕ್ಕೆ 310 ಹಾಳೆಗಳನ್ನು ತರಿಸಿದ್ದ. ಬಳಿಕ ಪಾರ್ಸೆಲ್ ಅನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ.
ವಿದೇಶದಿಂದ ತರಿಸಿಕೊಂಡಿದ್ದ ಪೇಪರ್ ಶೀಟ್ ಡ್ರಗ್ಸ್ ಹಾಳೆಯ ಮೇಲೆ ಹಳೆಯ ಛಾಪ ಕಾಗದದ ಮಾದರಿಯಲ್ಲಿ ಗಣೇಶನ ಚಿತ್ರ, ಮತ್ತಿತರೆ ಧಾರ್ಮಿಕ ಚಿತ್ರಗಳಿರುವುದರಿಂದ ಯಾರಿಗೂ ಅನುಮಾನ ಬಾರದಂತೆ ಕಾಗದ ರೂಪಿತವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಟ್ಟು ಪಾರ್ಸೆಲ್ ಮೌಲ್ಯ 16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 10x6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರಿನ ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಬಳಿಕ ಹತ್ತು ಗಂಟೆಗಳವರೆಗೂ ನಶೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿದು ಬಂದಿದೆ.
ಕೆನಡಾದಲ್ಲಿ ಸಿಗುವ ಎಲ್ಎಸ್ಡಿ ಎಂಬ ಹಾಳೆಯ ಆಕಾರದಲ್ಲಿರುವ ಡ್ರಗ್ಸ್ ಕೆನಡಾದಲ್ಲಿ ಸಿಗುವ ಎಲ್ಎಸ್ಡಿ ಎಂಬ ಹಾಳೆಯ ಆಕಾರದಲ್ಲಿರುವ ಡ್ರಗ್ಸ್ ಈ ಕುರಿತಂತೆ ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯರಿಗೆ ಮಾಹಿತಿ ದೊರಕಿದ್ದು ಹೆಬ್ಬಗೋಡಿ ಸಿಐ ಗೌತಂ ಮತ್ತು ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.