ಬೆಂಗಳೂರು: ಬಾಣಸವಾಡಿ-ಹೆಬ್ಬಾಳ ರೈಲು ನಿಲ್ದಾಣದ ನಡುವೆ ನಡೆದಿದ್ದ ಯುವಕನ ಕೊಲೆ ಪ್ರಕರಣ ಭೇದಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು, ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಮೊಹಮದ್ ಸಾದಿಕ್ ಹಾಗೂ ಮೂವರು ಅಪ್ರಾಪ್ತರು ಬಂಧಿತರು. ಮತ್ತೊಬ್ಬ ಆರೋಪಿ ಹೈದರ್ ಖಾನ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ನ.11ರಂದು ಬಾಣಸವಾಡಿ-ಹೆಬ್ಬಾಳ ರೈಲು ನಿಲ್ದಾಣಗಳ ನಡುವೆ ಕೆ.ಜಿ.ಹಳ್ಳಿಯ ಸುನೀಲ್(27) ಎಂಬಾತನ ಶವ ಪತ್ತೆಯಾಗಿತ್ತು. ಈ ಸಂಬಂಧ ಅಸಹಜ ಪ್ರಕರಣ ದಾಖಲಾಗಿತ್ತು. ಈ ನಡುವೆ ಮೃತನ ಸಹೋದರ ಅನಿಲ್ ತಮ್ಮ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಯಕ್ತಿಕ ದ್ವೇಷಕ್ಕೆ ಕೊಲೆ:
ಸುನೀಲ್ ಹಾಗೂ ಆರೋಪಿಗಳ ನಡುವೆ ನ.10ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಬಳಿಕ ಜಗಳ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಮಾರಕಾಸ್ತ್ರದಿಂದ ಸುನೀಲ್ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದರು. ಈ ಹತ್ಯೆ ಮುಚ್ಚಿ ಹಾಕಲು ಮೃತದೇಹವನ್ನು ಬಾಣಸವಾಡಿ-ಹೆಬ್ಬಾಳ ರೈಲು ನಿಲ್ದಾಣದ ನಡುವೆ ಎಸೆದು ಹೋಗಿದ್ದರು ಎಂದು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಬ್ಯಾಗ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಮತ್ತೊಂದು ಪ್ರಕರಣದಲ್ಲಿ ಪ್ರಯಾಣಿಕರ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬ್ಯಾಗ್ ನಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ನಗರ ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಡಿ.ವಿಜಯ್ (20) ಬಂಧಿತ. ಕಳೆದ ಮಾರ್ಚ್‌ನಲ್ಲಿ ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವಾಗ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಪ್ರಯಾಣಿಕರೊಬ್ಬರ ಚಿನ್ನದ ಸರ ಹಾಗೂ ಬಟ್ಟೆಯಿದ್ದ ಬ್ಯಾಗ್ ಕಳವುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ 1.40 ಲಕ್ಷ ರೂ. ಮೌಲ್ಯದ 31 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರೋಪಿ ವಿಜಯ್ ಅನುಮಾನಾಸ್ಪದವಾಗಿ ಓಡುತ್ತಿದ್ದ. ಈ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣದ ಬಗ್ಗೆ ಬಾಯಿಬಿಟ್ಟ. ಕದ್ದ ಚಿನ್ನದ ಸರವನ್ನು ಮಾರಾಟ ಮಾಡಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.