ಬೆಂಗಳೂರು: ತಾನೊಬ್ಬ ಪೊಲೀಸ್ ಎಂದು ಪರಿಚಯಿಸಿಕೊಂಡು, ಮುಂದೆ ಕಳ್ಳರಿದ್ದಾರೆ ಚೈನ್ ಬಿಚ್ಚಿಟ್ಟುಕೊಳ್ಳಿ ಎಂದು ಹೇಳಿ ಕಸಿದುಕೊಂಡು ಪರಾರಿಯಾಗುತ್ತಿದ್ದ ನಗರದ ಕುಖ್ಯಾತ ಸರಗಳ್ಳ ಸೈಯದ್ ಅಬೂಬ್ಕರ್‌ನನ್ನ ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
50 ವರ್ಷ ದಾಟಿದ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಈತ, ಸರಗಳ್ಳತನಕ್ಕೂ ಮುಂಚೆ ತಾನೊಬ್ಬ ಪೊಲೀಸ್ ಎಂದು ಪರಿಚಯಿಸಿಕೊಳ್ತಿದ್ದ.
ಬಳಿಕ, ಮುಂದೆ ಕಳ್ಳರಿದ್ದಾರೆ ಚೈನ್ ಬಿಚ್ಚಿಟ್ಟುಕೊಳ್ಳಿ ಎಂದು ಸಲಹೆ ನೀಡ್ತಿದ್ದ. ಇದನ್ನ ನಂಬಿದ ಮಹಿಳೆಯರು ಚೈನ್ ಬಿಚ್ಚುತ್ತಿದ್ದಂತೆ ಸರ ಕಿತ್ತುಕೊಂಡು ಪರಾರಿಯಾಗ್ತಿದ್ದ. ಇನ್ನು ಪ್ರಕರಣಗಳಲ್ಲಿ ಬೇಕಾಗಿದ್ದ ಈತ ಕೆಎಸ್‌ಆರ್‌ಪಿ ಪೊಲೀಸ್ ಪೇದೆಯ ಸಮವಸ್ತ್ರ ಎಗರಿಸಿದ್ದ. ಅಲ್ಲದೇ ಅದನ್ನ ಧರಿಸಿ ತಾನೊಬ್ಬ ಪೊಲೀಸ್ ಎಂದು ಮಹಿಳೆಯರನ್ನ ನಂಬಿಸುತ್ತಿದ್ದ. ಅಲ್ಲದೇ ಬನ್ನೇರುಘಟ್ಟದ ಬಳಿ ಸೆಕ್ಯುರಿಟಿಯೊಬ್ಬನ ಬಳಿಯಿದ್ದ ವಾಕಿಟಾಕಿ ಎಗರಿಸಿದ್ದ.
ಈತ ಈ ಹಿಂದೆ ಹಲವಾರು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಸದ್ಯ ನಸೀಬು ಗೆಟ್ಟು ಪೊಲೀಸರ ಅತಿಥಿಯಾಗಿರುವ ಈ ಖದೀಮನಿಂದ 50 ಲಕ್ಷ ಮೌಲ್ಯದ 40 ಚೈನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.