ಬೆಂಗಳೂರು: ಚಾಮರಾಜಪೇಟೆಯಲ್ಲಿ ಕಳೆದ ವಾರ ನಡೆದಿದ್ದ ವೃದ್ಧನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಲಕ್ಷಾಂತರ ರೂಪಾಯಿ ನಗನಾಣ್ಯ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಬಿಜೋರಾಮ್ ಗುಜರಾತ್ ಹಾಗೂ ರಾಜಸ್ಥಾನ ಗಡಿ ಪ್ರದೇಶ ಆರ್ಮಿಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರಕ್ನಿಂದ ತಪ್ಪಿಸಿಕೊಂಡು ಹೋಗುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಾಡಿ ವಾರಂಟ್ ಮೇರೆಗೆ ನಗರಕ್ಕೆ ನಾಳೆ ಸಂಜೆಯೊಳಗೆ ನಗರ ಪೊಲೀಸರು ಕರೆತರುತ್ತಿದ್ದಾರೆ. ಆರೋಪಿ ಚಾಮರಾಜಪೇಟೆಯಲ್ಲಿ ವಾಸ ಮಾಡಿಕೊಂಡಿದ್ದ 74 ವರ್ಷದ ಜುಗ್ಗರಾಜ್ ಜೈನ್ ಮನೆಯಲ್ಲಿ ಕಳೆದ ಆರು ತಿಂಗಳಿಂದ ಕೆಲಸ ಮಾಡಿಕೊಂಡಿದ್ದ ಹಾಗೆ ಕಡಿಮೆ ಅವಧಿಯಲ್ಲಿ ಮಾಲೀಕನ ವಿಶ್ವಾಸಗಳಿಸಿಕೊಂಡಿದ್ದ.
ಎಲೆಕ್ಟ್ರಿಕಲ್ ಬಿಸಿನೆಸ್ ಮಾಡಿಕೊಂಡಿದ್ದ ಜುಗ್ಗರಾಜ್ ಮೇ 24 ರ ರಾತ್ರಿ ಮನೆಯಲ್ಲೇ ಹಗ್ಗದಿಂದ ಕೈ - ಕಾಲು ಕಟ್ಟಿ ಪ್ಲಾಸ್ಟರ್ನಿಂದ ಬಾಯಿ ಮುಚ್ಚಿಸಿ ಕೊಲೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂರು ವಿಶೇಷ ತನಿಖಾ ತಂಡ ರಚಿಸಿ ಹಂತಕನ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಿತ್ತು.