ಬೆಂಗಳೂರು: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ನೈಸ್ ರಸ್ತೆ ಸಮೀಪದ ಶ್ರೀನಿವಾಸ ಕಾಲೋನಿ ಸಮೀಪದ ನಿವಾಸಿ ಮಣಿಕಂಠ (35) ಬಂಧಿತ ಆರೋಪಿ. ಬಂಧಿತನಿಂದ 6.35 ಲಕ್ಷ ರೂ. ಮೌಲ್ಯದ 131.5 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ಆರೋಪಿಯು, ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದ ಮನೆ ಮಾಲೀಕರನ್ನು ಹಿಂಬಾಲಿಸಿ ಮನೆಗಳ್ಳತನಕ್ಕೆ ಸಂಚು ರೂಪಿಸುತ್ತಿದ್ದನು. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಖಚಿತ ಮಾಹಿತಿ ಪಡೆದು, ರಾತ್ರಿ ವೇಳೆ ಮನೆಗೆ ನುಗ್ಗುತ್ತಿದ್ದನು. ಕಬ್ಬಿಣದ ರಾಡ್ ಬಳಸಿ ಮನೆಯ ಬೀಗ ಮತ್ತು ಡೋರ್‌ಲಾಕ್ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಓದಿ:ಆನೇಕಲ್ನಲ್ಲಿ ಮಹಿಳೆ ಮೇಲೆ ಕರಡಿ ದಾಳಿ ಯತ್ನ: ಪ್ರಾದೇಶಿಕ ಅರಣ್ಯ ವಿಭಾಗದಿಂದ ಶೋಧ ಕಾರ್ಯ
ಈ ಬಗ್ಗೆ ಖಚಿತ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿ ಮಣಿಕಂಠನನ್ನು ಬಂಧಿಸಿದ್ದಾರೆ. ಸುಬ್ರಮಣ್ಯಪುರ ಠಾಣೆಯಲ್ಲಿ ನಾಲ್ಕು ಮನೆ ಕಳ್ಳತನ ಪ್ರಕರಣ, ತಲಘಟ್ಟಪುರ ಠಾಣೆಯಲ್ಲಿ ಒಂದು ಕಳವು ಪ್ರಕರಣ, ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಒಂದು ವಾಹನ ಕಳವು ಪ್ರಕರಣ ಸೇರಿದಂತೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.