ಬೆಂಗಳೂರು:ಕ್ಷುಲ್ಲಕ ಕಾರಣಕ್ಕಾಗಿ ನಡೆದ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ಹೆಲ್ಮೆಟ್ನಿಂದ ವ್ಯಕ್ತಿಯೊಬ್ಬನ ತಲೆಗೆ ಹೊಡೆದು ಹತ್ಯೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಹತ್ಯೆಗೊಳಗಾದ ಯುವಕ.
ಕೆ.ಜಿ.ಹಳ್ಳಿ ನಿವಾಸಿ ಪ್ರವೀಣ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಸುಂದರ್, ಆರುಮುಗಂ ಹಾಗೂ ಪ್ರಭು ಎಂಬುವವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಪ್ರವೀಣ್ ಹಾಗೂ ಆರೋಪಿಗಳೆಲ್ಲರೂ ಪರಿಚಯಸ್ಥರಾಗಿದ್ದಾರೆ. ಸಭೆ - ಸಮಾರಂಭಗಳಲ್ಲಿ ಡಿಜೆ ಹಾಗೂ ಮೈಕ್ ಅಳವಡಿಸುವ ಕೆಲಸವನ್ನು ಪ್ರವೀಣ್ ಮಾಡುತ್ತಿದ್ದರೆ, ಶಾಮಿಯಾನ ಅಂಗಡಿಯಲ್ಲಿ ಸುಂದರ್ ಹಾಗೂ ಆತನ ಸಹಚರರು ಕೆಲಸ ಮಾಡುತ್ತಿದ್ದರು.
ಲಿಂಗರಾಜಪುರ ವಿಲೇಜ್ ಬಳಿ ಊರಹಬ್ಬದ ಹಿನ್ನೆಲೆಯಲ್ಲಿ ಡಿ.ಜೆ.ಮೈಕ್ ಸೆಟ್ ಹಾಕುವ ಜವಾಬ್ದಾರಿಯನ್ನು ಪ್ರವೀಣ್ ವಹಿಸಿಕೊಂಡಿದ್ದ. ಅದೇ ರೀತಿ ಆರೋಪಿಗಳು ಶಾಮಿಯಾನ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಮಂಗಳವಾರ ರಾತ್ರಿ ಡಿ.ಜೆ. ಹಾಕುವಾಗ ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳೊಂದಿಗೆ ಪ್ರವೀಣ್ ಗಲಾಟೆ ಮಾಡಿಕೊಂಡಿದ್ದ.