ಬೆಂಗಳೂರು:ನಿವೃತ್ತ ಡಿಜಿ ಶಂಕರ್ ಬಿದರಿಯವರ ಇಮೇಲ್ ಖಾತೆ ದುರ್ಬಳಕೆ ಮಾಡಿಕೊಂಡು ಹಣ ವಂಚಿಸಿದ್ದ ನಾಗಲ್ಯಾಂಡ್ ಮೂಲದ ಮಹಿಳೆ ಸೇರಿ ಮೂವರು ಸೈಬರ್ ಖದೀಮರನ್ನು ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಥಿಯಾ ಅಲಿಯಾಸ್ ರುಬಿಕಾ(31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಬಂಧಿತರು.
ಕಳೆದ ಫೆ.26ರಂದು ಶಂಕರ್ ಬಿದರಿಯವರ ಇ - ಮೇಲ್ ಖಾತೆ ಹ್ಯಾಕ್ ಮಾಡಿ ಸ್ನೇಹಿತರಿಗೆ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದರು. ಈ ಪೈಕಿ 25 ಸಾವಿರ ರೂ.ಹಣ ಆರೋಪಿಗಳ ಅಕೌಂಟ್ಗೆ ಜಮೆ ಮಾಡಿದ್ದರು. ಈ ಸಂಬಂಧ ಆಗ್ನೇಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಮುಖ ಆರೋಪಿಯಾದ ರುಬಿಕಾ ಕಳೆದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿಪಾರ್ಲರ್ಗಳಲ್ಲಿ ಮತ್ತು ಸೇಲ್ ಗರ್ಲ್ಗಳಾಗಿ ಕೆಲಸ ಮಾಡುತ್ತಿದ್ದಳು. ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಾದ ಜೇಮ್ಸ್ ಹಾಗೂ ಪೀಟರ್ ನೆರವಿನಿಂದ ಆನ್ಲೈನ್ ಮುಖಾಂತರ ಸಾರ್ವಜನಿಕರಿಗೆ ವಂಚಿಸುತ್ತಿದ್ದರು. ವಂಚಿಸಿದ ಹಣ ವರ್ಗಾವಣೆ ಮಾಡಲು ನಾಗಾಲ್ಯಾಂಡ್ ಮೂಲದ ನಿರುದ್ಯೋಗಿಗಳಿಂದ ಕೆಲಸ ಕೊಡಿಸುವ ಆಮಿಷವೊಡ್ಡಿ ಅವರಿಂದ ಬ್ಯಾಂಕ್ ಖಾತೆ ಸೇರಿದಂತೆ ಇತರ ದಾಖಲಾತಿ ಪಡೆದುಕೊಂಡು ಮೋಸ ಮಾಡುತ್ತಿದ್ದರು.
ಇದನ್ನು ಓದಿ: ಆಂಧ್ರಪ್ರದೇಶ ಪುರಸಭೆ - ನಗರ ಪಂಚಾಯಿತಿ ಚುನಾವಣೆ ಪ್ರಾರಂಭ
ಕಳೆದ ವರ್ಷ ನವೆಂಬರ್ನಿಂದ 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದು ಎಟಿಎಂ ಕಾರ್ಡ್ ಹಾಗೂ ಪಾಸ್ ಪೋರ್ಟ್ಗಳನ್ನು ಸೈಬರ್ ಅಪರಾಧ ಜಾಲದ ಆರೋಪಿಗಳಿಗೆ ನೀಡುತ್ತಿದ್ದಳು. ಬಂಧಿತರಿಂದ 4 ಮೊಬೈಲ್, ವಿವಿಧ ಹೆಸರಿನಲ್ಲಿರುವ 13 ಪ್ಯಾನ್ ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ ಕಾರ್ಡ್ ಹಾಗೂ 20ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ 2 ಲಕ್ಷ ರೂ.ಜಪ್ತಿ ಮಾಡಿಕೊಳ್ಳಲಾಗಿದೆ.