ಬೆಂಗಳೂರು :ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ. ಹಾಗೆಯೇ ಆ್ಯಪ್ ಬಳಸುವ ಯಾವುದೇ ವ್ಯಕ್ತಿಯ ಖಾಸಗಿ ವಿಚಾರಗಳು ಸೋರಿಕೆಯಾಗಲ್ಲ. ಆ್ಯಪ್ ಜಾರಿಗೆ ಕಾನೂನಿನ ಬೆಂಬಲವಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.
ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದ್ದ ಕ್ರಮ ಪ್ರಶ್ನಿಸಿ ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆಯನ್ನು ಕೊರೊನಾ ನಿಯಂತ್ರಿಸುವ ಭಾಗವಾಗಿ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕೇಂದ್ರದ ಈ ನಿರ್ಧಾರಕ್ಕೆ ಕಾನೂನಿನ ಬೆಂಬಲವೂ ಇದೆ.