ಬೆಂಗಳೂರು: ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಆ್ಯಪ್ ಬಳಕೆ ಕಡ್ಡಾಯವಲ್ಲ. ಬದಲಿಗೆ ಪ್ರಯಾಣಿಕರ ಆಯ್ಕೆಗೆ ಬಿಡಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ರೂಪಿಸಿರುವ ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆರೋಗ್ಯ ಸೇತು ಆ್ಯಪ್ ಬಳಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರೂ, ಕೇಂದ್ರದ ಪ್ರಾಧಿಕಾರಗಳು ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿವೆ. ನಾಗರಿಕರ ಅನುಮತಿ ಇಲ್ಲದೆ ಅವರ ಖಾಸಗಿ ಮಾಹಿತಿ ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಕೇಂದ್ರದ ನಿಯಂತ್ರಣಕ್ಕೆ ಒಳಪಡುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಮೆಟ್ರೋ ಪರ ವಕೀಲರಿಗೆ ಸ್ಪಷ್ಟನೆ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪರ ವಕೀಲರು ತಮ್ಮ ಸಂಸ್ಥೆಯು ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಹೊಸ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಆ್ಯಪ್ ಕಡ್ಡಾಯವಲ್ಲ, ಆಯ್ಕೆಯಷ್ಟೇ ಎಂದರು.