ಬೆಂಗಳೂರು:ಆರೋಗ್ಯ ಬಂಧು ಯೋಜನೆಯನ್ನು ಪರಿಷ್ಕೃತ ಮಾರ್ಗಸೂಚಿಗಳೊಂದಿಗೆ ಮುಂದುವರೆಸುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶದಲ್ಲಿ ಆರೋಗ್ಯ ಬಂಧು ಯೋಜನೆಯಡಿ ಅರ್ಹತಾ ಮಾನದಂಡಗಳನ್ನು ಪೂರೈಸಿರುವ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾತ್ರ ಮುಂದುವರೆಸುವಂತೆ ಹಾಗೂ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುತ್ತಿಗೆ ಅವಧಿ ಮುಕ್ತಾಯಗೊಂಡ ತಕ್ಷಣ ಇಲಾಖೆಯ ವಶಕ್ಕೆ ಪಡೆದು ನಿರ್ವಹಿಸುವಂತೆ ಆದೇಶಿಸಲಾಗಿತ್ತು.
ಈಗಾಗಲೇ ಮುಂದುವರೆಸಲಾದ 12 ಹಾಗೂ ಹೆಚ್ಚುವರಿಯಾಗಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಒಟ್ಟು ಈ ಕೆಳಕಂಡ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ ಹೊಸ ಮಾರ್ಗಸೂಚಿಯನ್ನು ಒಳಗೊಂಡಂತೆ ದಿನಾಂಕ 31-03-2023ರವರೆಗೆ ಮುಂದುವರೆಸಲು ಆದೇಶಿಸಲಾಗಿತ್ತು.
ಪರಿಷ್ಕೃತ ಮಾರ್ಗಸೂಚಿಗಳನ್ವಯ ಮೇಲ್ಕಾಣಿಸಿದ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ತಾತ್ಕಲಿಕವಾಗಿ ದಿನಾಂಕ 21-07-2022ರ ಆದೇಶದಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೂ ಇಲಾಖೆಯಲ್ಲಿ ನೀಡುವಂತಹ ಗುತ್ತಿಗೆ ವೇತನಕ್ಕೆ ಸಮನಾದ ವೇತನ ಪಾವತಿಸುವ ಷರತ್ತಿಗೊಳಪಟ್ಟು ಮುಂದುವರೆಸಲು ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು.
ಸರ್ಕಾರವು ಈ ಮೊದಲು ಮುಂದುವರೆಸಿರುವ 19 ಪ್ರಾಥಮಿಕ ಆರೋಗ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ 1 ತಿಂಗಳು ಅಂದರೆ ದಿನಾಂಕ 30-06-2023ರವರೆಗೆ ಮುಂದುವರೆಸಲು ಅನುಮೋದನೆ ನೀಡಲಾಗಿದೆ. ಅದ್ದರಿಂದ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ ಒಂದು ತಿಂಗಳು ಅಂದರೆ ದಿನಾಂಕ 30-06-2023ರವರೆಗೆ, ಹಿಂದಿನ ಆದೇಶದಲ್ಲಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೂ ಇಲಾಖೆಯಲ್ಲಿ ನೀಡುವಂತಹ ಗುತ್ತಿಗೆ ವೇತನಕ್ಕೆ ಸಮನಾದ ವೇತನ ಪಾವತಿಸುವ ಷರತ್ತಿಗೊಳಪಟ್ಟು, ಮುಂದುವರೆಸಲು ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.