ಬೆಂಗಳೂರು: ತಳ್ಳುಗಾಡಿಯಲ್ಲಿ ಹಣ್ಣು ಮತ್ತು ತರಕಾರಿ ಮಾರುವ ವ್ಯಾಪಾರಿಗಳಿಗೆ ಅನುಕೂಲವಾಗುವಂತಹ ಗಾಡಿಯನ್ನು ಐಐಹೆಚ್ಆರ್ ಸಂಸ್ಥೆ ಆವಿಷ್ಕಾರ ಮಾಡಿದೆ. ಸೌರಶಕ್ತಿ ಚಾಲಿತ ತ್ರಿಚಕ್ರ ಗಾಡಿ ಒಮ್ಮೆ ಚಾರ್ಚ್ ಆದರೆ 20 ಕಿ.ಮೀ ವ್ಯಾಪ್ತಿಯಲ್ಲಿ ತಳ್ಳುವ ಆಯಾಸವಿಲ್ಲದೇ ಆರಾಮಾಗಿ ಸಾಗುತ್ತದೆ.
ತಳ್ಳುಗಾಡಿ ತರಕಾರಿ ವ್ಯಾಪಾರಿಗಳ ಪಾಲಿಗೆ ವರವಾದ ‘ಅರ್ಕಾ ಟ್ರೈಸೈಕಲ್’ - Arka tricycle for vegetable salers
ತಳ್ಳುಗಾಡಿ ವ್ಯಾಪಾರಿಗಳ ಕಷ್ಟವನ್ನ ನೀಗಲೆಂದು ಭಾರತೀಯ ತೋಟಗಾರಿಕಾ ಸಂಸ್ಥೆಯ ವಿಜ್ಞಾನಿಗಳು ಸೌರಚಾಲಿತ ತ್ರಿಚಕ್ರ ಗಾಡಿಯನ್ನು ಆವಿಷ್ಕಾರ ಮಾಡಿದ್ದಾರೆ.
ಬೀದಿ ಬದಿಯ ವ್ಯಾಪಾರಿಗಳು ಮತ್ತು ತಳ್ಳುವ ಗಾಡಿ ವ್ಯಾಪಾರಿಗಳು ಬಿಸಿಲಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮಾರುತ್ತಾರೆ. ಆದರೆ, ಬಿಸಿಲ ತಾಪಕ್ಕೆ ತಾಜಾ ತರಕಾರಿಗಳು ಬೇಗ ಒಣಗಿಹೋಗುತ್ತವೆ. ಇದರಿಂದ ತರಕಾರಿ ಮತ್ತು ಮಣ್ಣುಗಳು ಮಾರಾಟವಾಗದೇ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಇದರ ಜೊತೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವ ತರಕಾರಿ ವ್ಯಾಪಾರಿಗಳು ಗಾಡಿಯನ್ನು ತಳ್ಳುವ ಶ್ರಮ ಹಾಕಬೇಕು. ಇದರಿಂದ ಅವರು ಸಹ ಬೇಗನೆ ಸುಸ್ತಾಗುತ್ತಾರೆ. ತಳ್ಳುಗಾಡಿ ವ್ಯಾಪಾರಿಗಳ ಕಷ್ಟ ನೀಗಲೆಂದು ಭಾರತೀಯ ತೋಟಗಾರಿಕಾ ಸಂಸ್ಥೆಯ ವಿಜ್ಞಾನಿಗಳು ಸೌರಚಾಲಿತ ತ್ರಿಚಕ್ರ ಗಾಡಿನ್ನು ಆವಿಷ್ಕಾರ ಮಾಡಿದ್ದಾರೆ.
ಈ ಗಾಡಿಗೆ ತಳ್ಳುವ ಶ್ರಮ ಬೇಕಾಗುವುದಿಲ್ಲ. ಒಮ್ಮೆ ಸೌರಶಕ್ತಿಯಿಂದ ಚಾರ್ಚ್ ಆದರೆ 20 ಕಿ.ಮೀ ವ್ಯಾಪ್ತಿಯಲ್ಲಿ ಆರಾಮವಾಗಿ ಓಡಾಡಬಹುದು. ಗಾಡಿಯೊಳಗೆ 200 ರಿಂದ 250 ಕೆಜಿ ತರಕಾರಿ ಮತ್ತು ಹಣ್ಣುಗಳನ್ನು ಇಡಬಹುದು. ಗಾಡಿಯೊಳಗೆ ನೀರಿನ ಸಿಂಪಡಣೆ ಅಳವಡಿಸಿರುವುದರಿಂದ ಹಣ್ಣು - ತರಕಾರಿಗಳು ದಿನವೆಲ್ಲ ತಾಜಾತನದಿಂದ ಇರುತ್ತವೆ. ಗಾಡಿಯಲ್ಲಿ ಧ್ವನಿವರ್ಧಕವನ್ನು ಇಡಲಾಗಿದ್ದು ವ್ಯಾಪಾರಿಗೆ ಕೂಗುವ ಶ್ರಮ ಸಹ ಇರುವುದಿಲ್ಲ. ತೂಕ ಮಾಡುವ ಯಂತ್ರವನ್ನು ಗಾಡಿ ಜೊತೆಗೆ ಕೊಡಲಾಗುತ್ತದೆ. ಈ ಗಾಡಿಯ ಬೆಲೆ 1.50 ಲಕ್ಷ ರೂಪಾಯಿ. ಭಾರತೀಯ ತೋಟಗಾರಿಕಾ ಸಂಸ್ಥೆ ಪರಿಶಿಷ್ಟ ಜಾತಿಯ ವ್ಯಾಪಾರಿಗಳಿಗೆ ಉಚಿತವಾಗಿ 5 ಗಾಡಿಗಳನ್ನು ವಿತರಣೆ ಸಹ ಮಾಡಿದೆ.