ಬೆಂಗಳೂರು: ಭಾರತ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಪರೋಕ್ಷವಾಗಿ ಆಪರೇಷನ್ ಕಮಲ ಪ್ರಸ್ತಾಪ ಮಾಡಿ ರಾಜ್ಯದ ಮೈತ್ರಿ ಸರ್ಕಾರ ಪತನ ಹಾಗೂ ಮಧ್ಯಪ್ರದೇಶ ಸರ್ಕಾರ ಅಸ್ಥಿರ ಯತ್ನದ ವಿಷಯ ಪ್ರಸ್ತಾಪಗೊಂಡು ಮಾತಿನ ಚಕಮಕಿ ನಡೆದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.
ವಿಧಾನ ಪರಿಷತ್ನ ಬೆಳಗಿನ ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಅಗತ್ಯ ಬಹುಮತದೊಂದಿಗೆ ಸ್ಥಿರವಾಗಿರುವ ಸರ್ಕಾರ ಇರುವಾಗ ಯಾರೋ ಬಂಡವಾಳಶಾಹಿ ಬಂದು 20 ಜನಕ್ಕೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಹೋಗುವ ವ್ಯವಸ್ಥೆ ಬಂದಿದೆ ಎಂದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ. ಉಪ ಚುನಾವಣೆಗೆ 100 ಕೋಟಿ ಖರ್ಚು ಮಾಡಿ ಗೆಲ್ಲುತ್ತಾರೆ. ಈಗ ಮಧ್ಯಪ್ರದೇಶದ ಶಾಸಕರನ್ನು ಕರೆತಂದು ಬೆಂಗಳೂರು ಇತ್ಯಾದಿ ಕಡೆ ಇರಿಸಿದ್ದಾರೆ. ಆ ಮೂಲಕ ಸ್ಥಿರ ಸರ್ಕಾರ ಅಸ್ಥಿರಕ್ಕೆ ಯತ್ನಿಸಲಾಗಿದೆ ಎಂದರು.
ಇದಕ್ಕೆ ಬಿಜೆಪಿ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಸಂವಿಧಾನದ ಬಗ್ಗೆ ಚರ್ಚೆ ಮಾಡುತ್ತೀರೋ? ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡುತ್ತೀರೋ? ಸ್ವಾತಂತ್ರ್ಯ ಬಂದ ನಂತರ ನೀವು ಯಾವ ಯಾವ ಸರ್ಕಾರ ಬೀಳಿಸಿದ್ದೀರಿ ಎನ್ನುವುದನ್ನೂ ಚರ್ಚೆ ಮಾಡೋಣ. 50 ವರ್ಷದಲ್ಲಿ ನೀವು ಏನೇನು ಮಾಡಿದ್ದೀರಿ ಎನ್ನುವುದನ್ನೂ ಚರ್ಚೆ ಮಾಡೋಣ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ತಿರುಗೇಟು ನೀಡಿದರು.
ನಂತರ ಸಭಾಪತಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮಾತು ಮುಂದುವರೆಸಿದ ನಾರಾಯಣಸ್ವಾಮಿ, ಒಬ್ಬ ಶಾಸಕನ ವೆಚ್ಚದ ಮಿತಿ 27 ಲಕ್ಷ ರೂ.. ಆದರೆ, ನೂರಾರು ಕೋಟಿ ಖರ್ಚು ಕಣ್ಣ ಮುಂದೆ ಕಾಣುತ್ತಿದೆ. ಆದರೂ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ, ಸಿಬಿಐ, ಆರ್ಬಿಐ,ಇಡಿ ಇತ್ಯಾದಿ ಸ್ವಾಯತ್ತ ಸಂಸ್ಥೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಪ್ರಶ್ನೆ ಮಾಡಬೇಕಲ್ಲವೇ ಎಂದು ತಮ್ಮ ಪ್ರಸ್ತಾಪ ಸಮರ್ಥನೆ ಮಾಡಿಕೊಂಡರು.
ಇಂದಿರಾಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿ ಸಾಮಾನ್ಯ ವ್ಯಕ್ತಿ ಬ್ಯಾಂಕ್ ಸೇವೆ ಪಡೆಯಲು ಅವಕಾಶ ಕಲ್ಪಿಸಿದರು, ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು, ಉಳುವವನೇ ಒಡೆಯ ಎಂದು ಭೂರಹಿತರಿ ಭೂಮಿ ಹಂಚಿಕೆ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಿಸಿಎಂ ಗೋವಿಂದ ಕಾರಜೋಳ, ಭೂ ಸುಧಾರಣಾ ಕಾಯ್ದೆ ಇಂದಿರಾ ಗಾಂಧಿ ಜಾರಿಗೆ ತಂದರು, ಆದರೆ ಇಲ್ಲಿ ಅರಸು ಅವರು ಇದ್ದ ಕಾರಣಕ್ಕೆ ಸಮರ್ಥವಾಗಿ ಜಾರಿಗೆ ತರಲಾಯಿತು. ಆದರೆ ಬೇರೆ ರಾಜ್ಯದಲ್ಲಿ ವಿಫಲವಾಗಿದೆ ಎಂದು ಅರಸು ಕೊಡುಗೆಯನ್ನು ಸ್ಮರಿಸಿದರು. ಇದಕ್ಕೆ ಕಾರಣ ಸಹಮತ ವ್ಯಕ್ತಪಡಿಸಿದರು. ನಂತರ ಯಾದಗಿರಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಎಸ್ಸಿ-ಎಸ್ಟಿ ಜನರಿಗೆ ಸಮುದಾಯದ ಭವನದಲ್ಲಿ ತಾಳಿ ಕಟ್ಟಿಸಿದರು, ಮೇಲ್ವರ್ಗದವರಿಗೆ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿದರು, ಭೋಜನವೂ ಬೇರೆ ಬೇರ ಕಡೆ ಮಾಡಿದ್ದಾರೆ. ಇದು ಏನು ತೋರಿಸಲಿದೆ, ಎಲ್ಲಿದೆ ಸಮಾನತೆ, ಅಸ್ಪೃಶ್ಯತೆ ಇನ್ನು ಇದೆ ಅಲ್ಲವೇ ಎಂದರು ನಾರಾಯಣಸ್ವಾಮಿ.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಶ್ರೀಮಂತರ ಬಳಿ ಹೋಗಬೇಡಿ, ಎಲ್ಲೆಲ್ಲೋ ಹೋಗುವ ಬದಲು ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಡಿಗೆ ಬನ್ನಿ ಎಂದು ಸಲಹೆ ನೀಡಿದರು. ರಾಜಕೀಯ, ಅಧಿಕಾರಿ ವರ್ಗ ಸೇರಿದಂತೆ ಸೇರಿದಂತೆ ಮೀಸಲಾತಿ ಪಡೆದವರು ಕೂಡ ಅಸ್ಪೃಶ್ಯರನ್ನು ಸಮಾನತೆಯಿಂದ ಕಾಣುತ್ತಿದ್ದಾರಾ?ಎಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು, ಎಲ್ಲರಿಗೂ ಅವಕಾಶ ಸಿಗುವಂತೆ ಯೋಚಿಸಬೇಕು. ಪಕ್ಷಾತೀತವಾಗಿ ಎಲ್ಲರೂ ಅವಲೋಕಿಸಬೇಕು ಎಂದರು.
ಕೆಲವರು ಸಂವಿಧಾನ ಬದಲು ಮಾಡುತ್ತೇವೆ ಎನ್ನುತ್ತಾರೆ ಎನ್ನುತ್ತಾ ನಾರಾಯಣಸ್ವಾಮಿ, ಸಂಸದ ಅನಂತ್ ಕುಮಾರ್ ಹೆಗಡೆ ಹೆಸರು ಪ್ರಸ್ತಾಪ ಮಾಡುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಈ ದೇಶಕ್ಕೆ ಸಂವಿಧಾನವೇ ಧರ್ಮಗ್ರಂಥ ಅಂದ ಹೇಳಿದ ಮೊದಲ ಪಿಎಂ ಮೋದಿ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮೊದಲ ಪಿಎಂ ನೆಹರು ಗ್ರಂಥ ಎಂದು ಸ್ವೀಕಾರ ಮಾಡಿದ್ದಾರೆ ಎಂದರು. ನಂತರ ಮಾತು ಮುಂದುವರೆಸಿದ ಕಾರಜೋಳ, ಸಂವಿಧಾನ ಧರ್ಮಗ್ರಂಥ ಎಂದ ಪಿಎಂ ಮೋದಿ ಹೇಳಿಕೆ ನೀಡಿ, ಈ ದೇಶದ ಸಂವಿಧಾನದ ಆಶಯಕ್ಕನುಗುಣವಾಗಿ ತಾವು ಪಿಎಂ ಆದೆ ಎಂದಿದ್ದಾರೆ ಎನ್ನುತ್ತಾ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಅಪವಾದ ಕುರಿತು ನಮ್ಮ ಎಂಪಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ, ವಿದ್ಯಾರ್ಥಿನಿಯೊಬ್ಬರು ಸರ್ಕಾರಿ ಸವಲತ್ತು ಕೇವಲ ಎಸ್ಸಿ-ಎಸ್ಟಿಗೆ ಕೊಡುತ್ತೀರಿ ಎಂದು ಕೇಳಿದಾಗ ಉತ್ತರಿಸುವಾಗ ಶಬ್ದ ಬಳಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಆ ರೀತಿ ಹೇಳಿಕೆ ನೀಡಿಲ್ಲ ಎಂದು ವಿವಾದಕ್ಕೆ ತೆರೆ ಎಳೆದರು.