ಬೆಂಗಳೂರು:ರಾಜ್ಯದಲ್ಲಿ ದಿನೇ - ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಹಲವು ಒತ್ತಡಗಳ ನಡುವೆಯೂ ಕೋವಿಡ್ ಕೇರ್ ಸೆಂಟರ್ಗಳು ಕಾರ್ಯೋನ್ಮುಖವಾಗಿವೆ.
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ 14 ಕೋವಿಡ್ ಕೇರ್ ಸೆಂಟರ್ಗಳನ್ನು ನಿರ್ಮಾಣ ಮಾಡಲಾಗಿದ್ದು, 2,013 ಹಾಸಿಗೆ ವ್ಯವಸ್ಥೆ ಇದೆ. ಇದರಲ್ಲಿ 600 ರಷ್ಟು ಭರ್ತಿಯಾಗಿದ್ದರೆ, ಇನ್ನು ಉಳಿದವು ಖಾಲಿಯಾಗಿವೆ. ಅಂದ ಹಾಗೇ, ಕೋವಿಡ್ ಕೇರ್ ಸೆಂಟರ್ನಲ್ಲಿ ರೋಗಿಗಳ ಮೇಲ್ವಿಚಾರಣೆ ಮಾಡಲು ಸರಿಯಾದ ವ್ಯವಸ್ಥೆ ಇದ್ಯಾ? ಏನೆಲ್ಲ ಮೂಲಭೂತ ಸೌಕರ್ಯಗಳು ಇರಲಿದೆ.
ಕೋವಿಡ್ ಕೇರ್ ಸೆಂಟರ್ ಎಂದರೇನು?
ನಗರದಲ್ಲಿ ಯಾವಾಗ ಸೋಂಕಿತರ ಸಂಖ್ಯೆ ಹೆಚ್ಚಾಯಿತೋ ಇತ್ತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗತೊಡಗಿದ್ದವು. ಸೋಂಕಿತರು ಪರದಾಡುವ ಪರಿಸ್ಥಿತಿ ಉಂಟಾಯ್ತು. ಅದೆಷ್ಟೋ ಸಾವು - ನೋವು ಸಂಭವಿಸಿತು. ಹೀಗಾಗಿ ಸೋಂಕಿತರು ಮತ್ತು ಸೋಂಕು ಲಕ್ಷಣ ರಹಿತ (ರೋಗ ಲಕ್ಷಣ ಇಲ್ಲದೇ ಇರುವುದು) ಅಂದರೆ A symptomatic ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಯ್ತು. ಇದಕ್ಕಾಗಿ ಕಮ್ಯುನಿಟಿ ಹಾಲ್, ಹಾಸ್ಟೆಲ್, ಶಾಲಾ ಕಾಲೇಜು ಆವರಣ, ಸ್ಟೇಡಿಯಂ, ಎಕ್ಸಿಬಿಷನ್ ಗ್ರೌಂಡ್ಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಯ್ತು.
50 ವರ್ಷದೊಳಗಿನವರ ರೋಗದ ತೀವ್ರತೆ ಕಡಿಮೆ ಇರುವವರಿಗೆ ಆಸ್ಪತ್ರೆ ಬದಲು ಕೋವಿಡ್ ಕೇರ್ ಸೆಂಟರ್ನಲ್ಲಿ ಆರೈಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹೋಂ ಐಸೋಲೇಷನ್ಗೆ ಮನೆಯಲ್ಲಿ ಪ್ರತ್ಯೇಕ ರೂಮ್ ವ್ಯವಸ್ಥೆ ಇಲ್ಲದೇ ಇದ್ದರೆ ಕುಟುಂಬದ ಇತರ ಸದಸ್ಯರನ್ನು ಸೋಂಕಿನಿಂದ ರಕ್ಷಿಸಲು ಕೋವಿಡ್ ಕೇರ್ ಸೆಂಟರ್ಗೆ ಹೋಗಬಹುದು. ಹಾಗೇಯೇ ವಲಸೆ ಬರುವ ಯುವಕರಿಗೆ ಸಹಕಾರಿಯಾಗಲಿದೆ. ಪಿಜಿಗಳಲ್ಲಿ ಅಥವಾ ಚಿಕ್ಕ ರೂಮ್ ಮಾಡಿಕೊಂಡು ವಾಸ ಇರುವವರಿಗೆ ಸೋಂಕು ದೃಢಪಟ್ಟಾಗ ಕಡಿಮೆ ರೋಗ ಲಕ್ಷಣ ಇದ್ದರೆ ಅವರು ಕೋವಿಡ್ ಕೇರ್ ಸೆಂಟರ್ಗೆ ಹೋಗಬಹುದು.
ನಗರದಲ್ಲಿ ಎಷ್ಟಿವೆ ಕೋವಿಡ್ ಕೇರ್ ಸೆಂಟರ್ಸ್?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 14 ಕೋವಿಡ್ ಕೇರ್ ಸೆಂಟರ್ಗಳಿವೆ. ಮೆಜೆಸ್ಟಿಕ್ನ ಸರ್ಕಾರಿ ಆಯುರ್ವೇದ ಕಾಲೇಜು, ಚಾಮರಾಜಪೇಟೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್, ಹಜ್ ಭವನ, ಎಚ್ಎಎಲ್, ಕಾರ್ಮಿಕ ಭವನ, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಹೆಬ್ಬಾಳದ ಮಂಗಳ ರೈತ ಭವನ, ನವ್ಯ ಅಂತಾರಾಷ್ಟ್ರೀಯ ಕೋವಿಡ್ ಕೇರ್ ಸೆಂಟರ್, ಜ್ಞಾನ ಭಾರತಿ ಕ್ಯಾಂಪಸ್, ಶಾಂತಿನಗರ ಕೊರೊನಾಕೇರ್, ಯುನಾನಿ ಆಸ್ಪತ್ರೆ ಹಾಗೂ ಆಡುಗೋಡಿ ಬಾಷ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬೊಮ್ಮನಹಳ್ಳಿ ಕೋವಿಡ್ ಕೇರ್ ಸೆಂಟರ್ಗಳು ಇವೆ.