ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ ಗೆಲ್ಲಲು ಬಿಜೆಪಿ ವರಿಷ್ಠ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದು, ಕರ್ನಾಟಕದಲ್ಲಿ 6 ಕಡೆ ಮೋದಿ ಹಾಗೂ 8 ಕಡೆ ಅಮಿತ್ ಶಾ ಸಮಾವೇಶ ಆಯೋಜಿಸಿದೆ. ಜೊತೆಗೆ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಕೂಡಾ ರಾಜ್ಯದ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಏಪ್ರಿಲ್ 8ರಂದು ಬೆಳಗ್ಗೆ ಚಿತ್ರದುರ್ಗ, ಮಧ್ಯಾಹ್ನ ಮೈಸೂರು, ಏಪ್ರಿಲ್ 13 ರಂದು ಬೆಳಗ್ಗೆ ಮಂಗಳೂರು, ಸಂಜೆ ಬೆಂಗಳೂರು, ಏಪ್ರಿಲ್ 18 ರಂದು ಬೆಳಗ್ಗೆ-ಚಿಕ್ಕೋಡಿ ಮಧ್ಯಾಹ್ನ ಗಂಗಾವತಿಯಲ್ಲಿ ಸಮಾವೇಶವನ್ನುದ್ದೇಶಿ ಮಾತನಾಡಲಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಮತದಾನವಾಗುವಾಗ ಉತ್ತರ ಕರ್ನಾಟಕದಲ್ಲಿ ಮೋದಿ ಸಮಾವೇಶ ನಡೆಸಲಿದ್ದು ಇದರಿಂದ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದಲೂ ಭರ್ಜರಿ ರಾಜ್ಯ ಪ್ರವಾಸ ನಡೆಯಲಿದೆ. ಏಪ್ರಿಲ್ 10,12,17,20 ರಂದು ರಾಜ್ಯದಲ್ಲಿ ಅಮಿತ್ ಶಾ ಪ್ರಚಾರ ನಡೆಸಲಿದ್ದು, ದಾವಣಗೆರೆ, ಹಾಸನ, ತುಮಕೂರು, ಕೋಲಾರ, ಕಲಬುರಗಿ, ವಿಜಯಪುರ, ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಮತ ಯಾಚಿಸಲಿದ್ದಾರೆ. ಇವರ ಜೊತೆ ಇತರ ನಾಯಕರು ಕೂಡ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದರು.
ಮೇಯರ್ ಇನ್ ಕೌನ್ಸಿಲ್ ಈಗ ನೆನಪಾಯ್ತಾ..?
ರಾಹುಲ್ ಗಾಂಧಿಯವರು ನಗರಗಳ ಬೆಳವಣಿಗೆ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ, ಚಿಂತನೆ ಶುರು ಮಾಡಿದ್ದಾರೆ. ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಗೆ ಬರಬೇಕು ಎಂದಿದ್ದಾರೆ. ಬಿಬಿಎಂಪಿಯಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿ ಇರೋದು ಕಾಂಗ್ರೆಸ್ನದ್ದೇ, ಮೇಯರ್ ಇನ್ ಕೌನ್ಸಿಲ್ ವಿಷಯ ಬಿ.ಎಸ್.ಪಾಟೀಲ್ ವರದಿಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಆರು ವರ್ಷವಾದರೂ ತಜ್ಞರ ವರದಿ ಶಿಫಾರಸುಗಳನ್ನ ಜಾರಿಗೊಳಿಸಲು ರಾಹುಲ್ ಗಾಂಧಿಯವರ ಕಾಂಗ್ರೆಸ್ ನಿಂದ ಸಾಧ್ಯವಾಗಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ರೆ ಅದನ್ನು ಬೇರೆ ಉದ್ದೇಶಗಳಿಗೆ ರಾಜ್ಯ ಸರ್ಕಾರ ಬಳಕೆ ಮಾಡಿದೆ.ರಾಹುಲ್ ಗಾಂಧಿ ಮತ್ತು ಯು.ಟಿ.ಖಾದರ್ ಇದಕ್ಕೆ ಉತ್ತರಿಸಬೇಕು ಎಂದರು.
ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಜಾರಿಗೊಳಿಸಲು ಕ್ಯಾಬಿನೆಟ್ ನಲ್ಲಿ ನಿರ್ಣಯಿಸಲಾಗಿದ್ದ ಕೆಲವು ಹಾಸ್ಯಾಸ್ಪದ ಕಂಡಿಷನ್ಗಳನ್ನ ತೆಗೆದು ಹಾಕಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ ಪ್ರಕ್ರಿಯೆ ಮಾತ್ರ ಪ್ರಾರಂಭಿಸಿಲ್ಲ.ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದರು.