ಬೆಂಗಳೂರು:ಶಾಸಕ ಲಿಂಬಾವಳಿ ಬಿಲ್ಡರ್ ಜೊತೆ ಶಾಮೀಲಾಗಿ, ದಲಿತರ ಮೇಲೆ ಪೊಲೀಸರನ್ನು ಬಿಟ್ಟು ಇಲ್ಲಸಲ್ಲದ ಕೇಸ್ಗಳನ್ನು ಹಾಕಿಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ದಲಿತರು ಪ್ರತಿಭಟಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಸರ್ಜಾಪುರ ಮುಖ್ಯರಸ್ತೆಯ ಕೊಡತಿ ಬಳಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದ್ದು, ಬಿಜಾಪುರ ಮೂಲದ ಬಿಲ್ಡರ್ ಕೃಷ್ಣಪ್ಪ ಎಂಬ ದಲಿತ ವ್ಯಕ್ತಿ ಒಂದೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ರು. ಇದೀಗ ಆ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಅರವಿಂದ ಲಿಂಬಾವಳಿ ಮೇಲೆ ದೌರ್ಜನ್ಯದ ಆರೋಪ ಇನ್ನು ಭೂಮಿ ಮಾರಾಟ ಮಾಡಿದ್ದ ಕೃಷ್ಣಪ್ಪ ಎರಡು ಗುಂಟೆ ಜಾಗವನ್ನು ಉಳಿಸಿಕೊಂಡಿದ್ದು, ಆ ಜಾಗಕ್ಕೆ ಹನ್ನೆರಡು ಅಡಿಯಷ್ಟು ಓಡಾಡಲು ಜಾಗ ಬಿಡಿ ಎಂದು ಕೇಳಲು ಹೋಗಿದ್ದಾರೆ. ಆದ್ರೆ ದಲಿತ ಕೃಷ್ಣಪ್ಪ ಹಾಗು ಮುಖಂಡರ ಮೇಲೆ ಬಿಲ್ಡರ್ ಜೊತೆ ಸೇರಿಕೊಂಡು ಶಾಸಕ ಲಿಂಬಾವಳಿ ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ನಮ್ಮ ಮೇಲೆ ಅನವಶ್ಯಕ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ರು.
ದುಡ್ಡು ಇರುವವರಿಗೆ ಶಾಸಕರು ಬೆಲೆ ಕೊಡ್ತಾರೆ, ಹಣ ಇಲ್ಲದ ಬಡವನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ರಸ್ತೆಯ ಜಾಗವನ್ನು ಬಿಟ್ಟು ಕೆಲಸ ಮುಂದುವರಿಸುವಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಿದ್ದರೂ ಸಹ ಶಾಸಕನ ಜೊತೆ ಶಾಮೀಲಾಗಿ ಕೋರ್ಟ್ ನಿರ್ದೇಶನಕ್ಕೂ ಬೆಲೆ ಕೊಡುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಿಪಬ್ಲಿಕ್ ಸೇನೆಯ ಅಧ್ಯಕ್ಷ ಶಂಕರ್ ಮಹದೇವಪುರ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.