ಬೆಂಗಳೂರು: ಪಿಎಸ್ಐ ಹಗರಣ ಸಂಬಂಧ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಆಡಿಯೋ ವಿಚಾರ ಕುರಿತಂತೆ ಯಾರೂ ಕೂಡ ದೂರು ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಬಹುದಿತ್ತಲ್ಲವೇ ಎನ್ನುವ ಪ್ರಶ್ನೆಗೆ ಅರೆಕ್ಷಣ ತಬ್ಬಿಬ್ಬಾದರು.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ.. ಆಡಿಯೋ ಹಿಂದೆ ರಾಜಕೀಯ ಕುತಂತ್ರ: ಶಾಸಕ ದಡೇಸಗೂರು
ನಂದಿತಾ ಸಾವು ಪ್ರಕರಣ ಸಿಬಿಐಗೆ ನೀಡುವಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಎಲ್ಲ ಸಾಕ್ಷ್ಯ ನಾಶ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡಿ ಈಗ ಸಿಬಿಐಗೆ ಕೊಡಿ ಎಂದರೆ ಹೇಗೆ?. ಆಗ ಸಿಐಡಿ ತನಿಖೆ ಹೇಗೆ ಮಾಡಿದೆ ಎಂದು ಗೊತ್ತಿದೆ ಎಂದರು.
ಶಂಕಿತ ಉಗ್ರರ ಬಂಧನ ವಿಚಾರ: ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವರು, ಐಎಸ್‌ಐ ಸಂಘಟನೆಗೆ ಸಂಬಂಧಿಸಿದ ಮೂವರನ್ನು ಪತ್ತೆ ಹಚ್ಚಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ತೀರ್ಥಹಳ್ಳಿಯ ನಿವಾಸಿ, ಮತ್ತೋರ್ವನಿಗೆ ಕರಾವಳಿ ನಂಟು ಇದೆ. ಶಿವಮೊಗ್ಗದ ತೀರ್ಥಹಳ್ಳಿ ಭಾಗದಲ್ಲಿ ಇಂಥವರಿದ್ದಾರೆ ಅನ್ನೋದೇ ಆತಂಕಕಾರಿ ವಿಷಯ. ಅಲ್ಲಿನ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ. ಈ ಸಂಬಂಧ ತನಿಖೆ ಮುಂದುವರೆದಿದೆ. ಮತ್ತಷ್ಟು ವಿಚಾರಗಳು ತನಿಖೆಯಿಂದ ಹೊರ ಬರಬೇಕಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ನಂದಿತಾ ನಿಗೂಢ ಸಾವು ಪ್ರಕರಣ: ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಮನವಿ