ಬೆಂಗಳೂರು :ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಆರಂಭಿಸಿದ್ದ ವೈಟ್ ಟಾಪಿಂಗ್ನ ವಿರೋಧಿಸಿದ ಬಿಜೆಪಿಯೇ, ಅಧಿಕಾರಕ್ಕೆ ಬಂದ ಬಳಿಕ ಇದೇ ಯೋಜನೆಗೆ ಅನುಮೋದನೆ ನೀಡಲು ಮುಂದಾಗಿದೆ. ಬಿಎಸ್‌ವೈ ರಾಜೀನಾಮೆ ನೀಡುವ ಕೊನೆ ಘಳಿಗೆಯಲ್ಲಿ 1,172 ಕೋಟಿಯ ವೈಟ್ ಟಾಪಿಂಗ್ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಆರಂಭಿಸಿದ್ದ ವೈಟ್ ಟಾಪಿಂಗ್ ಯೋಜನೆ ಭ್ರಷ್ಟಾಚಾರ ಯೋಜನೆ. 1 ಕಿ.ಮೀ ರಸ್ತೆ ನಿರ್ಮಿಸಲು 14 ಕೋಟಿ ಖರ್ಚು ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಅಂತಾ ಖುದ್ದು ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಆರೋಪಿಸಿದ್ದರು.
ಅಷ್ಟೇ ಅಲ್ಲ, ವೈಟ್ ಟಾಪಿಂಗ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ತನಿಖೆ ನಡೆಸಿ ಯೋಜಯನ್ನೇ ರದ್ದು ಮಾಡಿದ್ದರು. ಆದ್ರೆ, ರಾಜೀನಾಮೆ ನೀಡುವ ಮುನ್ನ ವೈಟ್ ಟಾಪಿಂಗ್ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.
ವಿರೋಧ ವ್ಯಕ್ತಪಡಿಸಿ ಸ್ಥಗಿತಗೊಳಿಸಿದ್ದ ಕಾಂಗ್ರೆಸ್ ವೈಟ್ ಟಾಪಿಂಗ್ ಯೋಜನೆಗೆ ಬಿಜೆಪಿ ಅಸ್ತು ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆಯಡಿ ಒಟ್ಟು 159 ರಸ್ತೆಗಳನ್ನ ವೈಟ್ ಟಾಪಿಂಗ್ ಮಾಡಲು ಕಾಂಗ್ರೆಸ್ ಸರ್ಕಾರ ಉದ್ದೇಶಿಸಿತ್ತು. ಅವುಗಳಲ್ಲಿ ಮೊದಲ ಹಂತಕ್ಕೆ 201.79 ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗಳಿಗಾಗಿ 442.99 ಕೋಟಿ ಅನುದಾನ ನೀಡಿತ್ತು. ಎರಡೂ ಹಂತದ ಕಾಮಗಾರಿಗಳು ಈಗ ಬಹುತೇಕ ಪೂರ್ಣಗೊಂಡಿವೆ. ಮೂರನೇ ಹಂತದ ಕಾಮಗಾರಿಗೂ ಹಿಂದಿನ ಸರ್ಕಾರವೇ ಅನುಮೋದನೆ ನೀಡಿ ಅನುದಾನ ನಿಗದಿ ಮಾಡಿತ್ತು.
ಮೊದಲ ಎರಡು ಹಂತದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಮುಖಂಡರು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರು. ಕ್ಯಾಪ್ಟನ್ ಆರ್.ಆರ್.ದೊಡ್ಡಿಹಾಳ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಿ ವರದಿಯನ್ನೂ ಸರ್ಕಾರ ಪಡೆದುಕೊಂಡಿದೆ. ಹಿಂದಿನ ಸರ್ಕಾರಗಳು ಪ್ರತಿ ಕಿ.ಮೀ. ಕಾಮಗಾರಿಗೆ 14 ಕೋಟಿಯಷ್ಟು ವೆಚ್ಚ ಮಾಡಿದ್ದವು.
ಒಂದು ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಯನ್ನ ಕೇವಲ 4 ಕೋಟಿ ವೆಚ್ಚದಲ್ಲಿ ಮುಗಿಸಿ ತೋರಿಸುತ್ತೇವೆ ಎಂದು ಯಡಿಯೂರಪ್ಪ 2019ರ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ನಗರ ಪ್ರದಕ್ಷಿಣೆ ವೇಳೆ ಸವಾಲು ಹಾಕಿದ್ದರು. ಆದರೆ, ಅದು ಕಾರ್ಯಗತ ಆಗಲಿಲ್ಲ. ಆದ್ರೀಗ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುವ ಮುನ್ನ ಮೂರನೇ ಹಂತದ ವೈಟ್ ಟಾಪಿಂಗ್‌ಗೆ ಖುದ್ದು ತಾವೇ ಅನುಮೋದನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ, ಸರ್ಕಾರದಿಂದ ಈ ನಿರ್ದೇಶನ ಇನ್ನಷ್ಟೇ ಬರಬೇಕಿದೆ. ಬಂದ ನಂತರ ಪ್ರಕ್ರಿಯೆ ಆರಂಭಿಸಲಾಗುವುದು. ವೈಟ್ ಟಾಪಿಂಗ್ ಬಗ್ಗೆ ಸಧ್ಯ ಏನೂ ಮಾತನಾಡಲು ಸಾಧ್ಯವಿಲ್ಲ ಎಂದರು.