ಬೆಂಗಳೂರು:ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ, ಪ್ರಸಕ್ತ ಆರ್ಥಿಕ ವರ್ಷ (2021-22)ದ ಪೂರಕ ಅಂದಾಜುಗಳ 26,953.33 ರೂ.ಗಳ ಧನವಿನಿಯೋಗ ವಿಧೇಯಕಕ್ಕೆ ವಿಧಾನಪರಿಷತ್ ಅಂಗೀಕಾರ ನೀಡಿತು. ವಿಧಾನಪರಿಷತ್ ವಿತ್ತೀಯ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಮಂಡನೆ ಮಾಡಿದರು.
ತೆರಿಗೆ ಸಂಗ್ರಹ ನಮ್ಮ ನಿರೀಕ್ಷೆ ಮೀರಿ ಬಂದಿದೆ. ಜಿಎಸ್ಟಿ ಪಾಲು ಕೂಡ ನಮಗೆ ಹೆಚ್ಚು ಬಂದಿದೆ. ಹೀಗಾಗಿ ಹೆಚ್ಚು ಬಂದಿರೋ ಹಣ ಖರ್ಚು ಮಾಡಲು ಈ ಅನುಮತಿ ಪಡೆಯಲಾಗುತ್ತಿದೆ. ವಿಧೇಯಕಕ್ಕೆ ಅನುಮೋದನೆ ಕೊಡಬೇಕು ಎಂದು ಮಾಧುಸ್ವಾಮಿ ಸದನಕ್ಕೆ ಮನವಿ ಮಾಡಿದರು.
ಅಗತ್ಯತೆಗೆ ತಕ್ಕಂತೆ, ಚಾಲ್ತಿ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಬಲ ನೀಡುವುದಕ್ಕೆ ಹಣ ವಿನಿಯೋಗಿಸಲಾಗಿದೆ. ಹಾಗಾಗಿ ಶೇ.10 ರಷ್ಟು ಹೆಚ್ಚುವರಿ ಹಣವನ್ನೊಳಗೊಂಡ ಪೂರಕ ಅಂದಾಜನ್ನು ಸಮರ್ಥಿಸಿಕೊಂಡರು. ಅಲ್ಲದೆ ಸರ್ಕಾರದ ಈ ಪ್ರಯತ್ನಕ್ಕೆ ಕೆಳಮನೆ ಶ್ಲಾಸಿದ್ದು, ಮೇಲ್ಮನೆಯೂ ಇದೇ ರೀತಿ ಮೆಚ್ಚುಗೆ ವ್ಯಕ್ತಪಡಿಸಿ, ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬೆಂಬಲಿಸಿದರು.
ಇದನ್ನೂ ಓದಿ:ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಧನ ವಿನಿಯೋಗ ವಿಧೇಯಕ ಅಂಗೀಕಾರ
ನಂತರ ಧನವಿನಿಯೋಗ ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಇದು ರಾಜ್ಯದ ಬಜೆಟ್ ವಿಚಾರ. ಹೀಗೆ ದಿಢೀರ್ ಅಂತ ಮಂಡನೆ ಮಡೋದು ಸರಿಯಲ್ಲ. ಅಲ್ಲದೇ ಧನ ವಿನಿಯೋಗ ವಿಧೇಯಕವನ್ನು ಮುಖ್ಯಮಂತ್ರಿಗಳು ಮಂಡನೆ ಮಾಡಬೇಕಿತ್ತು. ಆದರೆ ಕಾನೂನು ಮಂತ್ರಿಗಳು ಮಂಡನೆ ಮಾಡಿದ್ದಾರೆ. ಮುಂದೆ ಇಂತಹ ಸಂಪ್ರದಾಯ ಮಾಡುವುದು ಬೇಡ ಎಂದು ಸಲಹೆ ನೀಡಿ ವಿಧೇಯಕಕ್ಕೆ ಸಹಮತ ನೀಡಿದರು. ನಂತರ ಧನವಿನಿಯೋಗ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನಪರಿಷತ್ ಅಂಗೀಕಾರ ನೀಡಿತು.