ಬೆಂಗಳೂರು: ಕೊರೊನಾ ನಿಯಂತ್ರಣ ಸಂಬಂಧ ರಾಜ್ಯದ ಕ್ರಮಗಳ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳೂ ಕರ್ನಾಟಕ ಮಾದರಿ ಅನುಸರಿಸಲು ಕರೆ ಕೊಟ್ಟಿದ್ದಾರೆ. ನಮಗೂ ಬೇರೆ ರಾಜ್ಯಗಳಿಗೆ ಸಲಹೆ ಕೊಡಲು ತಿಳಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ ಮತ್ತು ಡಾ. ಅಶ್ವಿನ್ ಕುಮಾರ್ ಚೌಬೆ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಜತೆ ವಿಡಿಯೋ ಸಂವಾದ ನಡೆಸಿದ್ದು, ಸಂವಾದದಲ್ಲಿ ರಾಜ್ಯದಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭಾಗವಹಿಸಿದ್ದರು. ಈ ವೇಳೆ ಸಚಿವರು ರಾಜ್ಯದ ಕ್ರಮಗಳ ಬಗ್ಗೆ ಸಮಗ್ರ ವಿವರ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಡಿಯೋ ಸಂವಾದದ ನಂತರ ವಿಶ್ವೇಶ್ವರಯ್ಯ ಟವರ್ಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ವಿಡಿಯೋ ಕಾನ್ಫರೆನ್ಸ್ನಲ್ಲಿ ಇಡೀ ದೇಶದ ಆರೋಗ್ಯ ಸಚಿವರು, ಅಧಿಕಾರಿಗಳು ಭಾಗವಹಿಸಿದ್ದರು. ನಮ್ಮ ರಾಜ್ಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರವಾಗಿ ಹೇಳಿದ್ದೇವೆ. ರಾಜ್ಯದ ಕ್ರಮಗಳ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ಕೊರೊನಾ ಬಂದರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಬಂದರೆ ಕಳಂಕ ಅಂತ ಅನ್ಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್. ಜ್ವರ ಹೇಗೆ ಬರುತ್ತೋ ಇದೂ ಕೂಡಾ ಹಾಗೆ. ಶೇ. 97ರಷ್ಟು ಪ್ರಮಾಣದಲ್ಲಿ ಕೊರೊನಾ ಬಂದವರಿಗೆ ವಾಸಿಯಾಗಿದೆ ಎಂದರು.
ಕೊರೊನಾ ಬೇಗ ಹೋಗಲ್ಲ. ಸೀಲ್ ಡೌನ್ ಮಾಡಿದ ಕೂಡಲೇ ಕೊರೊನಾ ಹೋಗಲ್ಲ. ಕೊರೊನಾ ನಮ್ಮ ಜೊತೆಯೇ ಇರುತ್ತೆ. ಅದರಿಂದ ಹೇಗೆ ರಕ್ಷಣೆ ತಗೋಬೇಕು, ಹೇಗೆ ಅಂತರ ಕಾಯ್ದುಕೊಳ್ಳಬೇಕು ಅನ್ನೋದನ್ನು ನಾವು ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಎರಡೂವರೆ ತಿಂಗಳಾದರೂ ಕೇವಲ 445 ಮಾತ್ರ ಪಾಸಿಟಿವ್ ಬಂದಿದೆ. ಈ ಪೈಕಿ 200ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ ಎಂದರು.
ಕೊರೊನಾ ಬಂದವರನ್ನು ಅಸಹ್ಯದಿಂದ ನೋಡಬಾರದು. ಇದು ಸಾಮಾಜಿಕ ಪಿಡುಗಲ್ಲ. ಸಾಮಾನ್ಯ ಶೀತ ಜ್ವರ ಬಂದರೆ ಹೇಗೆ ವಾಸಿ ಆಗುತ್ತದೆಯೋ ಹಾಗೆಯೇ ಕೊರೊನಾ ಕೂಡ ವಾಸಿ ಆಗುತ್ತದೆ. ಯಾವ ಭಯ ಬೇಡ, ಮುನ್ನೆಚ್ಚರಿಕೆ ಯಾಕೆ ಅಂದರೆ ಅದು ಹರಡಬಾರದು ಎನ್ನುವ ಕಾರಣಕ್ಕೆ ಮಾತ್ರ. ಇದೊಂದು ಸಮಾಜಿಕ ಪಿಡುಗು ಎನ್ನುವ ರೀತಿ ನೋಡಬಾರದು ಎಂದರು.
ನಾಳೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭ: ಪ್ಲಾಸ್ಮಾ ಥೆರಪಿಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಇಂದು ಸೂಚನೆ ನೀಡಿದ್ದು, ನಾಳೆ ಪ್ಲಾಸ್ಮಾ ಥೆರಪಿಯನ್ನು ಮೊದಲ ರೋಗಿಗೆ ಮಾಡಲಿದ್ದೇವೆ. ಥೆರಪಿಗೆ ಡೋನರ್ ಸಹ ಸಿಕ್ಕಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಾಳೆ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಯಲಿದೆ ಎಂದರು.