ಬೆಂಗಳೂರು:ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜಧಾನಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಐಟಿ ಹಬ್ ಎಂದೇ ಕರೆಯಿಸಿಕೊಳ್ಳುವ ಪೂರ್ವ ವಿಭಾಗದ ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು, ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಮೂರು ಪಟ್ಟು ಸುರಿದ ಮಹಾಮಳೆಗೆ ಸವಾರರು ಕಂಗಲಾಗಿದ್ದಾರೆ.
ರಸ್ತೆಗಳ ಜೊತೆಗೆ ಅಪಾರ್ಟ್ಮೆಂಟ್ ನೆಲಮಹಡಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಡಾವಣೆಗಳು, ಕಿರಿದಾದ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಆವರಿಸಿಕೊಂಡು ಕೆರೆಯಂತಾಗಿವೆ. ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಸಂಚಾರ ವ್ಯವಸ್ಥೆಯನ್ನ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರಂತೂ ಶತಪ್ರಯತ್ನ ನಡೆಸುತ್ತಿದ್ದಾರೆ. ಇವರ ಕಾರ್ಯವೈಖರಿಗೆ ರಾಜಧಾನಿಯ ಜನರು ಶಾಘ್ಲನೆ ವ್ಯಕ್ತಪಡಿಸುತ್ತಿದ್ದಾರೆ.
ಮಳೆಯಿಂದಾಗಿ ತೊಂದರೆಯಾಗಿರುವ ಮಾರ್ಗಗಳಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಸಂಚಾರಿ ಪೊಲೀಸರು ರೈನ್ ಕೋಟ್ ಧರಿಸಿ ಮಳೆ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆಯೋ ಆ ಸ್ಥಳಗಳಲ್ಲಿ ಪೊಲೀಸರು ಸುಗಮ ಸಂಚಾರಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.