ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್ಆರ್ಟಿಸಿ) ನಿರ್ವಾಹಕರೊಬ್ಬರ ಕರ್ತವ್ಯ ಪ್ರಜ್ಞೆಯಿಂದ ಚಾಲಾಕಿ ಕಳ್ಳರಿಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಮಂಗಳೂರಿನ ಎರಡನೇ ಘಟಕದ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಮುಂಜಾನೆ 5 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಗಡಿಯಾರದ ಬಳಿ ತಲುಪಿದಾಗ ಬಸ್ನಲ್ಲಿದ್ದ ಒಬ್ಬ ಪ್ರಯಾಣಿಕ ತುರ್ತಾಗಿ ನೈಸರ್ಗಿಕ ಕರೆಗೆ ಹೋಗಬೇಕು ಎಂದು ಬಸ್ ನಿಲ್ಲಿಸಲು ಹೇಳಿದ್ದರು. ಚಾಲಕ ಮತ್ತು ನಿರ್ವಾಹಕರು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅವಕಾಶ ಮಾಡಿಕೊಟ್ಟಿದ್ದಾರೆ.
ಸುಮಾರು ಐದು ನಿಮಿಷದ ನಂತರ ಇನ್ನೊಬ್ಬ ಪ್ರಯಾಣಿಕ ಕೂಡ ನೈಸರ್ಗಿಕ ಕರೆಗಾಗಿ ಹೋಗುವುದಾಗಿ ತಿಳಿಸಿ ವಾಹನದಿಂದ ಇಳಿದು ಹೋಗಿದ್ದಾರೆ. ಸುಮಾರು 10 ನಿಮಿಷ ಕಳೆದರೂ ಇಬ್ಬರೂ ಪ್ರಯಾಣಿಕರು ಬಾರದಿದ್ದ ಹಿನ್ನೆಲೆಯಲ್ಲಿ ಅವರಿಗೆ ಫೋನ್ ಮಾಡಿದ್ದಾರೆ. ಆದರೆ ಇಬ್ಬರ ಮೊಬೈಲ್ ಕೂಡ ಸ್ವಿಚ್ ಆಫ್ ಬಂದಿದೆ. 15 ನಿಮಿಷಗಳವರೆಗೆ ಬಸ್ ಕಂಡಕ್ಟರ್, ಡ್ರೈವರ್, ಸಹ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನಿಂದ ಸುತ್ತಮುತ್ತದ ಸ್ಥಳಗಳನ್ನು ಪರಿಶೀಲಿಸಿ, ಇಬ್ಬರೂ ಸಿಗದಿರುವ ಕಾರಣ ಫೋನ್ ಮೂಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಅವರ ಸೂಚನೆಯಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬಸ್ಸಿನಲ್ಲಿರುವ ಎಲ್ಲ ಪ್ರಯಾಣಿಕರಿಗೆ ತಮ್ಮ ಲಗೇಜ್ಗಳನ್ನು ಪರಿಶೀಲಿಸುವಂತೆ ತಿಳಿಸಿದ್ದರು.
ಎಲ್ಲ ಪ್ರಯಾಣಿಕರು ತಮ್ಮ ಲಗೇಜ್ಗಳು ಸರಿಯಾಗಿವೆ ಎಂದು ತಿಳಿಸಿದ ಕಾರಣ ಬಸ್ ಅಲ್ಲಿಂದ ಹೊರಟಿತ್ತು. ಅದೇ ದಿನ ಬೆಳಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ಪ್ರಯಾಣಿಕರಾದ ಲಕ್ಷ್ಮಿ ಎಂಬವರು ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗ್ ಒಳಗಡೆ ಇಟ್ಟಿದ್ದ ಸುಮಾರು ಎರಡೂವರೆ ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಹಣ ಕಳೆದು ಹೋಗಿರುವುದಾಗಿ ತಿಳಿಸಿದ್ದರು. ನಿರ್ವಾಹಕರು ಮಹಿಳೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದರು.