ಪ್ರತಿಪಕ್ಷದ ನಾಯಕನ ನೇಮಕ ವಿಚಾರ ಲೇವಡಿ ಮಾಡಿದ ಶಾಸಕ ಲಕ್ಷ್ಮಣ್ ಸವದಿ ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳು ಕಳೆದರೂ ಪ್ರತಿಪಕ್ಷ ನಾಯಕನ ನೇಮಕ ಮಾಡಲು ಬಿಜೆಪಿ ಹೈಕಮಾಂಡ್ಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿವಾರ ಕಳೆದರೂ ಇನ್ನೂ ಕೂಡ ಬಿಜೆಪಿ ಪ್ರತಿಪಕ್ಷ ನಾಯಕನ ಹೆಸರನ್ನು ಕೇಂದ್ರ ನಾಯಕರು ಬಹಿರಂಗಪಡಿಸಿಲ್ಲ.
ಈ ವಿಷಯವಾಗಿಯೇ ಇಂದು ವಿಧಾನಸಭೆಯಲ್ಲಿ ಸ್ವಲ್ಪ ದಿನ ತಟಸ್ಥವಾಗಿರಿ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರೇ ಆರಂಭದಲ್ಲಿ ಪ್ರತಿಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಾರೆ. ನಂತರ ಎರವಲು ಸೇವೆಯ ಮೇಲೆ ವಿಪಕ್ಷ ನಾಯಕನ ಸ್ಥಾನ ಬಿಟ್ಟುಕೊಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರು ಲೇವಡಿ ಮಾಡಿದರು.
ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರು, ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಚರ್ಚೆ ಮಾಡುವಾಗ, ಬಿಜೆಪಿಯವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಕೆಳಗಿಳಿಸಿದರು ಎಂದು ಇದುವರೆಗೆ ಯಾರೂ ಹೇಳಿಲ್ಲ. ಬಿಎಸ್ವೈ ಅವರನ್ನು ಅಧಿಕಾರದಿಂದ ಇಳಿಸಿರುವುದು ಏಕೆ ಎಂಬುದರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಟ್ಟರೇ, ಬಹುಶಃ ಲಕ್ಷ್ಮಣ್ ಸವದಿ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಅವರಿಗೆ ಮಾಹಿತಿ ಇರಬಹುದು. ಇನ್ನು ಪ್ರಾದೇಶಿಕ ಸರ್ಕಾರವಿರುವ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ :ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಲಕ್ಷ್ಮಣ್ ಸವದಿ ಅವರು, ಬಿ ಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿಷಯ ಕುರಿತು ನನಗಿಂತಲೂ ಜಿ ಟಿ ದೇವೇಗೌಡ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಆದರೆ ಅದನ್ನು ಹೇಳುತ್ತಿಲ್ಲ ಎಂದು ತಿರುಗೇಟು ನೀಡಿದರು. ಇನ್ನು ಸ್ವಲ್ಪ ದಿನ ಸುಮ್ಮನಿದ್ದು ನೋಡಿ. ಪ್ರತಿಪಕ್ಷದ ನಾಯಕನ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ನನಗೆ ಕೇಂದ್ರದಲ್ಲಿರುವ ಹಳೆ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಬಿಜೆಪಿಯಲ್ಲಿ ಕಚ್ಚಾಡುತ್ತಿದ್ದು, ಯಾರಿಗೂ ವಿಪಕ್ಷ ನಾಯಕನ ಸ್ಥಾನ ಸಿಗುವುದಿಲ್ಲ.
ಹೀಗಾಗಿಯೇ ಸದನದಲ್ಲಿ ವಿಪಕ್ಷ ನಾಯಕನ ಕುರ್ಚಿಯ ಮೇಲೆ ಯಾರೂ ಕುಳಿತುಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕನಾಗಿ ಒಳ್ಳೆಯ ಕೆಲಸ ಮಾಡುತ್ತಾರೆ. ಆಮೇಲೆ ಬಿಜೆಪಿಯವರಿಗೆ ಬಿಟ್ಟುಕೊಡುತ್ತಾರೆ. ಎರವಲು ಸೇವೆಯ ಮೇಲೆ ವಿಪಕ್ಷ ನಾಯಕನ ಸ್ಥಾನ ಹಂಚಿಕೆಯಾಗಲಿದೆ ಎಂದು ತಿಳಿಸಿದರು. ನಂತರ ಎದ್ದು ನಿಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಲಕ್ಷ್ಮಣ್ ಸವದಿಯನ್ನು ಬಿಜೆಪಿಯಿಂದ ಆಚೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ಸವದಿ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾದರು.
ಇದನ್ನೂ ಓದಿ :ಅಡ್ಜೆಸ್ಟ್ಮೆಂಟ್ ರಾಜಕೀಯ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಸವಾಲು!