ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸದಸ್ಯ ಸ್ಥಾನಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಅವರನ್ನು ನಾಮನಿರ್ದೇಶನ ಮಾಡಿದ ಆದೇಶವನ್ನು ಸರ್ಕಾರ ಹಿಂಪಡೆದು ಮೊಮೋ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಮನಿರ್ದೇಶನ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಜಿ.ಮರಿಸ್ವಾಮಿ ನಾಮನಿರ್ದೇಶನ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಕೆಎಸ್‌ಪಿಸಿಬಿ ಸದಸ್ಯ ಸ್ಥಾನಕ್ಕೆ ಮರಿಸ್ವಾಮಿಯ ನಾಮನಿರ್ದೇಶನ ಮಾಡಿದ್ದ ಆದೇಶ ಹಿಂಪಡೆದು ಪರಿಸರ ಮತ್ತು ಅರಣ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಫೆ.೯ರಂದು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿ, ಆ ಕುರಿತ ಮೆಮೊವನ್ನು ಪೀಠಕ್ಕೆ ಒದಗಿಸಿದರು.