ಬೆಂಗಳೂರು: ಜೆ.ಪಿ. ನಗರದ ಕೆಎಎಸ್ ಅಧಿಕಾರಿಗಳ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡ ಪರಿಶೀಲಿಸಲು ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಜೆ.ಪಿ.ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ವಿವಾದಿತ ಕಟ್ಟಡವಿರುವ ಜಾಗ ಪರಿಶೀಲಿಸಿ ವಾಸ್ತವಾಂಶ ತಿಳಿಯಲು ಹಿರಿಯ ಅಧಿಕಾರಿಯನ್ನು ನೇಮಿಸಬೇಕು. ಆ ಅಧಿಕಾರಿ ಸ್ಥಳ ಪರಿಶೀಲಿಸಿ, ಒಂದೊಮ್ಮೆ ಕಟ್ಟಡದ ಮಾಲೀಕರು ಸ್ವಾಧೀನಾನುಭವ ಪತ್ರವನ್ನು ಪಡೆಯದಿದ್ದರೆ ಹಾಗೂ ನಕ್ಷೆ ಮಂಜೂರಾತಿಯನ್ನು ಉಲ್ಲಂಘಿಸಿದ್ದರೆ ಕಟ್ಟಡದ ತೆರವಿಗೆ ಕೆಎಂಸಿ ಕಾಯ್ದೆ 321ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿತು.