ಕರ್ನಾಟಕ

karnataka

ETV Bharat / state

ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ರಾಜ್ಯದಿಂದ ಪಾಲ್ಗೊಂಡವರ ಮಾಹಿತಿ ಕೋರಿ ಹೈಕೋರ್ಟ್​ಗೆ ಅರ್ಜಿ

ದೆಹಲಿಯ ಮರ್ಕಜ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ವ್ಯಕ್ತಿಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್​ಗೆ ಅರ್ಜಿ
ಹೈಕೋರ್ಟ್​ಗೆ ಅರ್ಜಿ

By

Published : Apr 2, 2020, 10:59 PM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವ ಅಪಾಯದ ಸಂದರ್ಭದಲ್ಲೂ ದೆಹಲಿಯ ಮರ್ಕಜ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ವ್ಯಕ್ತಿಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಿರುವುದರಿಂದ‌ ಸಂಕಷ್ಟಕ್ಕೀಡಾಗಿರುವ ಜನತೆಗೆ ಮತ್ತು ಕೊರೊನಾ ಸೋಂಕು ಪೀಡಿತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಹೀಗೆ ಕೋರಿ ಗೀತಾ ಮಿಶ್ರ ಅವರು ಈ ಹಿಂದೆ ಹೈಕೋರ್ಟ್​ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ಕೂಡಾ ವಿಚಾರಣೆ ಹಂತದಲ್ಲಿದೆ. ಅದಕ್ಕೆ ಪೂರಕವಾಗಿ ಈ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.

ಕೋವಿಡ್ -19 ವಿಚಾರವಾಗಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಲಿದೆ. ಈ ವೇಳೆ‌ ಮಧ್ಯಂತರ ಅರ್ಜಿಯನ್ನೂ ಪರಿಗಣಿಸುವಂತೆ ಅರ್ಜಿದಾರರು ಮನವಿ‌ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 110ಕ್ಕಿಂತ ಹೆಚ್ಚು ದೃಢಪಟ್ಟಿವೆ‌.

ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ 350ಕ್ಕೂ ಹೆಚ್ಚು ಜನ ದೆಹಲಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸೋಂಕು ಹರಡದಂತೆ ತಡೆಯಲು ಅವರೆಲ್ಲರನ್ನು ಕ್ವಾರಂಟೈನ್ ಮಾಡಬೇಕಿದೆ. ಆದ್ದರಿಂದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ವ್ಯಕ್ತಿಗಳ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ‌.

ABOUT THE AUTHOR

...view details