ಬೆಂಗಳೂರು:ವೈದ್ಯಕೀಯ ಕೋರ್ಸ್ ಕಾಯ್ದೆ ಅಡಿ ಶಿಕ್ಷಣ ಪೂರೈಸಿರುವ ಸ್ನಾತಕೋತ್ತರ ಪದವೀಧರರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿರುವ ಕರ್ನಾಟಕ ಕಡ್ಡಾಯ ಸೇವೆ ತರಬೇತಿಯ ಸೆಕ್ಷನ್ 4 ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಡಾ.ಕೀರ್ತಿ ಕರ್ನೂಲ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಂಡಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಇದೇ ವಿಚಾರಕ್ಕೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳ ಜೊತೆ ಈ ಪ್ರಕರಣವನ್ನೂ ಸೇರಿಸಲು ರಿಜಿಸ್ಟ್ರಿಗೆ ಸೂಚಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಕೇಂದ್ರ, ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಫೆ. 22ಕ್ಕೆ ಮುಂದೂಡಿತು.
ಇದನ್ನೂ ಓದಿ: ಬಿಡಾಡಿ ಪ್ರಾಣಿಗಳ ಕಲ್ಯಾಣಕ್ಕೆ ಯಾವ ಯೋಜನೆ ಇದೆ?: ಸರ್ಕಾರದಿಂದ ಮಾಹಿತಿ ಕೇಳಿದ ಹೈಕೋರ್ಟ್
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ಸ್ನಾತಕೋತ್ತರ ಪದವೀಧರ ವೈದ್ಯರಾಗಿದ್ದು, ಅವರು 2018-19 ಮತ್ತು 2019-20ರಲ್ಲಿ ಶಿಕ್ಷಣ ಪೂರೈಸಿದ್ದಾರೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಮಾಹಿತಿ ಪಟ್ಟಿಯಲ್ಲಿ ಕೆಸಿಎಸ್ ಕಾಯ್ದೆ ಅಡಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಉಲ್ಲೇಖಿಸಿರಲಿಲ್ಲ. ಆದ್ದರಿಂದ, ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕು ಎಂಬುದರಿಂದ ಅರ್ಜಿದಾರರಿಗೆ ವಿನಾಯಿತಿ ನೀಡಬೇಕು ಎಂದು ಕೋರಿದರು.
ಅರ್ಜಿದಾರರ ಕೋರಿಕೆ:
2021ರ ಆಗಸ್ಟ್ 21ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಡೀಮ್ಡ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂದು ಕೆಸಿಎಸ್ ಕಾಯ್ದೆಯಲ್ಲಿ ಹೇಳಿದೆ. ಆದರೆ, ಈ ಕುರಿತು ಎಂಸಿಸಿ ಅಥವಾ ರಾಜ್ಯ ಸರ್ಕಾರ ಕೋರ್ಸ್ಗೆ ಪ್ರವೇಶ ಪಡೆಯುವುದಕ್ಕೆ ಮುನ್ನ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಕಡ್ಡಾಯ ಗ್ರಾಮೀಣ ಸೇವೆ ಬಗ್ಗೆ ತಿಳಿದು ಅಚ್ಚರಿಯಾಗಿದೆ. ಕೋರ್ಸ್ ಪೂರೈಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಹೀಗಾಗಿ, ತಮಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವುದರಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.