ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ಸಂಬಂಧ ಅರ್ಜಿ ವಿಚಾರಣೆ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - ಬೆಂಗಳೂರು ಇತ್ತೀಚಿನ ಸುದ್ದಿ

ಸರ್ಕಾರಕ್ಕೆ ಚುನಾವಣೆ ನಡೆಸಲು ಇಷ್ಟವಿಲ್ಲವೇ?. ಕೊರೊನಾ ನಡುವೆಯೂ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಸರ್ಕಾರಕ್ಕೆ ಗ್ರಾಪಂ ಚುನಾವಣೆಗಳನ್ನು ನಡೆಸಲು ಕಷ್ಟವಾಗುತ್ತಿದೆಯೇ?. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ವಾಸ್ತವವಾಗಿ ಗ್ರಾ.ಪಂ ಚುನಾವಣೆ ನಡೆಸಲು ಸರ್ಕಾರವೇ ಮುಂದೆ ಬರಬೇಕಿತ್ತು..

ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ತೀರ್ಪು ಕಾಯ್ದಿರಿಸಿದ ಹೈಕೋರ್ಟ್

By

Published : Oct 23, 2020, 4:44 PM IST

ಬೆಂಗಳೂರು: ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿರುವ ಹೈಕೋರ್ಟ್, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದರೂ ಸಹ ಚುನಾವಣೆಗಳನ್ನು ನಡೆಸುವ ಸಂಬಂಧ ಆಯೋಗ ಯಾವುದೇ ನಿರ್ಧಾರ ಕೈಗೊಳ್ಳಲು ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಅವಧಿ ಮುಗಿದಿರುವ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ಕೆ ಸಿ ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೀಠಕ್ಕೆ ಮಾಹಿತಿ ನೀಡಿ, ಚುನಾವಣೆ ನಡೆಸಬಾರದು ಎಂಬುದು ಸರ್ಕಾರದ ಉದ್ದೇಶವಲ್ಲ. ಬದಲಿಗೆ ಕೊರೊನಾ ಹಿನ್ನೆಲೆ ಜನರ ಸುರಕ್ಷತೆಗೆ ಗಮನ ನೀಡಿ ಸ್ವಲ್ಪ ಕಾಲಾವಕಾಶ ಕೇಳುತ್ತಿದ್ದೇವೆ ಎಂದು ಈ ಹಿಂದೆ ಹೇಳಿದ್ದನ್ನೇ ಪುನರುಚ್ಚರಿಸಿದರು. ಜತೆಗೆ ಚುನಾವಣಾ ಆಯೋಗ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದರು.

ಇದಕ್ಕೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್ ಫಣೀಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣೆ ನಡೆಸಲು ಸರ್ಕಾರದ ಜೊತೆ ಸಾಕಷ್ಟು ಬಾರಿ ಮಾತುಕತೆ ನಡೆಸಿದ್ದೇವೆ. ಜಿಲ್ಲಾಧಿಕಾರಿಗಳ ಜೊತೆಯೂ ಸಮಾಲೋಚನೆ ನಡೆಸಿ, ಸುರಕ್ಷಿತವಾಗಿ ಚುನಾವಣೆ ನಡೆಸುವ ಸಂಬಂಧ ಎಸ್‌ಒಪಿ ಕೂಡ ಸಿದ್ದಪಡಿಸಲಾಗಿದೆ. ಸೋಂಕು ಕಡಿಮೆ ಇರುವೆಡೆ ಮೊದಲು ಚುನಾವಣೆ ನಡೆಸಲು ಆಯೋಗ ಯೋಜನೆ ರೂಪಿಸಿದೆ ಎಂದರು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿ, ಸರ್ಕಾರ ಚುನಾವಣೆ ನಡೆಸಲು ಆಯೋಗಕ್ಕೆ ಮುಕ್ತ ಅವಕಾಶ ಕೊಡುತ್ತಿಲ್ಲ. ಅವಧಿ ಮುಗಿದಿರುವ ಗ್ರಾಮ ಪಂಚಾಯತ್‌ಗಳಿಗೆ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದ್ದು, ಅವರ ಅವಧಿ ಡಿಸೆಂಬರ್​ಗೆ ಮುಕ್ತಾಯವಾಗಲಿದೆ. ಆ ಬಳಿಕ ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ಹೀಗಾಗಿ, ನ್ಯಾಯಾಲಯವೇ ಚುನಾವಣೆಗಳನ್ನು ನಡೆಸಲು ಸೂಕ್ತ ನಿರ್ದೇಶನ ನೀಡಬೇಕು ಎಂದರು.

ವಾದ- ಪ್ರತಿವಾದ ಆಲಿಸಿದ ಬಳಿಕ ಸರ್ಕಾರಕ್ಕೆ ಕಟುವಾಗಿ ಪ್ರಶ್ನಿಸಿದ ಪೀಠ, ಸರ್ಕಾರಕ್ಕೆ ಚುನಾವಣೆ ನಡೆಸಲು ಇಷ್ಟವಿಲ್ಲವೇ?. ಕೊರೊನಾ ನಡುವೆಯೂ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ಸರ್ಕಾರಕ್ಕೆ ಗ್ರಾಪಂ ಚುನಾವಣೆಗಳನ್ನು ನಡೆಸಲು ಕಷ್ಟವಾಗುತ್ತಿದೆಯೇ?. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ವಾಸ್ತವವಾಗಿ ಗ್ರಾ.ಪಂ ಚುನಾವಣೆ ನಡೆಸಲು ಸರ್ಕಾರವೇ ಮುಂದೆ ಬರಬೇಕಿತ್ತು. ಆದರೆ, ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಬಳಿಕ ವಾದ-ಪ್ರತಿವಾದ ಆಲಿಸುವುದನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ ಪೀಠ, ಅರ್ಜಿದಾರರು ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 29ರೊಳಗೆ ಲಿಖಿತವಾಗಿ ಸಲ್ಲಿಸುವಂತೆ ಸೂಚನೆ ನೀಡಿತು.

ABOUT THE AUTHOR

...view details