ಕರ್ನಾಟಕ

karnataka

ETV Bharat / state

ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ: ಮತ್ತೊಮ್ಮೆ ಪರೀಕ್ಷೆಗೆ ಸೂಚಿಸಿದ ಹೈಕೋರ್ಟ್​ - HC reaction

ಅನಪೇಕ್ಷಿತ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂತ್ರಸ್ತ ಯುವತಿಯ ಪರೀಕ್ಷೆ ನಡೆಸಿ ಗರ್ಭಪಾತಕ್ಕೆ ಅವಕಾಶವಿದೆಯೇ, ಇಲ್ಲವೇ ಎಂಬುದನ್ನು ತಿಳಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

High Court
ಹೈಕೋರ್ಟ್

By

Published : May 21, 2020, 9:06 PM IST

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆ ತನ್ನೊಳಗಿರುವ ಭ್ರೂಣವನ್ನು ತೆಗೆಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಗರ್ಭಪಾತಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಎರಡನೇ ಬಾರಿ ವೈದ್ಯರಿಗೆ ಸೂಚಿಸಿದೆ.

ಕಾರವಾರ ಮೂಲದ ಮಹಿಳೆಯೊಬ್ಬರು ಅತ್ಯಾಚಾರಕ್ಕೆ ಒಳಗಾಗಿರುವ ತಮ್ಮ ಮಗಳ ಹೊಟ್ಟೆಯಲ್ಲಿರುವ ಅನಪೇಕ್ಷಿತ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಕಾರವಾರ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮಂಡಳಿ ವರದಿ ಸಲ್ಲಿಸಿತು. ಬಳಿಕ ಭ್ರೂಣಕ್ಕೆ 24 ವಾರ ತುಂಬಿರುವ ಹಿನ್ನೆಲೆಯಲ್ಲಿ ಗರ್ಭಪಾತ ನಡೆಸುವುದು ತೀರ ಕಷ್ಟಸಾಧ್ಯ ಎಂದು ತಿಳಿಸಿತು.

ಈ ವೇಳೆ ಸಂತ್ರಸ್ತೆಯ ಪರ ವಕೀಲರು ಅಪ್ರಾಪ್ತ ಯುವತಿಯ ಭವಿಷ್ಯದ ಹಿತದೃಷ್ಟಿಯಿಂದ ಗರ್ಭಪಾತ ಅವಶ್ಯವಾಗಿದೆ. ಹೀಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಿಂದ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ತರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅರ್ಜಿದಾರರ ಕೋರಿಕೆ ಮನ್ನಿಸಿದ ಪೀಠ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶನ ನೀಡಿ, ಸಂತ್ರಸ್ತ ಯುವತಿಯ ಪರೀಕ್ಷೆ ನಡೆಸಿ ಗರ್ಭಪಾತಕ್ಕೆ ಅವಕಾಶವಿದೆಯೇ, ಇಲ್ಲವೇ ಎಂಬುದನ್ನು ಮೇ 26ರ ಒಳಗೆ ತಿಳಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details