ಕರ್ನಾಟಕ

karnataka

ETV Bharat / state

ಅಜೀಂ ಪ್ರೇಮ್ ಜಿ ವಿರುದ್ಧ ದುರುದ್ದೇಶಪೂರಿತ ಅರ್ಜಿ : ಚೆನ್ನೈ ಮೂಲದ ವಕೀಲರಿಬ್ಬರಿಗೆ ಜೈಲು ಶಿಕ್ಷೆ

ಅಜೀಂ ಪ್ರೇಮ್ ಜಿ ವಿರುದ್ಧದ ದುರುದ್ದೇಶಪೂರಿತ ಅರ್ಜಿಯನ್ನು ಸಲ್ಲಿಸಿದ್ದ ಚೆನ್ನೈ ಮೂಲದ ವಕೀಲರಿಬ್ಬರಿಗೆ ಹೈಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 2 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟದಿದ್ದರೇ, ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ..

ಹೈಕೋರ್ಟ್
ಅಜೀಂ ಪ್ರೇಮ್ ಜಿ ವಿರುದ್ಧ ದುರುದ್ದೇಶಪೂರಿತ ಅರ್ಜಿ

By

Published : Jan 17, 2022, 5:14 PM IST

Updated : Jan 17, 2022, 5:41 PM IST

ಬೆಂಗಳೂರು :ಉದ್ಯಮಿ ಹಾಗೂ ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್ ಜಿ ಮತ್ತವರ ಟ್ರಸ್ಟ್ ವಿರುದ್ಧ ದುರುದ್ದೇಶಪೂರ್ವಕ ಅರ್ಜಿಗಳನ್ನು ಸಲ್ಲಿಸಿದ್ದ ಚೆನ್ನೈ ಮೂಲದ ಇಬ್ಬರು ವಕೀಲರಿಗೆ ಹೈಕೋರ್ಟ್ ತಲಾ 2 ತಿಂಗಳು ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿದೆ.

ಅಜೀಂ ಪ್ರೇಮ್ ಜಿ ಹಾಗೂ ಅವರ ನೇತೃತ್ವದ ಟ್ರಸ್ಟ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದ ಚೆನ್ನೈ ಮೂಲದ ಎನ್​ಜಿಒ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್​​ಫರೆನ್ಸಿ ಸಂಸ್ಥೆ ತನಿಖೆಗೆ ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ಹೈಕೋರ್ಟ್ 10 ಲಕ್ಷ ರೂ. ದಂಡ ವಿಧಿಸಿ ವಜಾಗೊಳಿಸಿತ್ತು.

ಬಳಿಕ ಅಜೀಂ ಪ್ರೇಮ್ ಜಿ ಹಾಗೂ ಟ್ರಸ್ಟ್ ದೂರುದಾರರಾದ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್​​​ಫರೆನ್ಸಿ ಹಾಗೂ ಪ್ರತಿನಿಧಿಗಳಾದ ವಕೀಲ ಆರ್. ಸುಬ್ರಮಣಿಯನ್ ಹಾಗೂ ಪಿ. ಸದಾನಂದ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಬ್ಬರ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭ

ಈ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲತಾ ಅವರಿದ್ಧ ವಿಭಾಗೀಯ ಪೀಠ, ವಕೀಲರಿಬ್ಬರಿಗೂ ತಲಾ 2 ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇದೇ ವೇಳೆ ದಂಡದ ಮೊತ್ತ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

ತೀರ್ಪನ್ನು ಜಾರಿಗೊಳಿಸಲು ನ್ಯಾಯಾಂಗ ರಿಜಿಸ್ಟ್ರಾರ್​​ಗೆ ನಿರ್ದೇಶಿಸಿರುವ ಪೀಠ, ಮೇಲ್ಮನವಿ ಸಲ್ಲಿಕೆಗೆ ಕಾಲಾವಕಾಶ ಕೋರಿದ ಹಿನ್ನೆಲೆ, ತೀರ್ಪನ್ನು ನಾಲ್ಕು ವಾರ ಕಾಲ ಅಮಾನತಿನಲ್ಲಿರಿಸಿದೆ. ಇದೇ ವೇಳೆ ದೂರುದಾರ ವಕೀಲರು ಅಜೀಂ ಪ್ರೇಮ್ ಜಿ ಹಾಗೂ ಅವರ ಟ್ರಸ್ಟ್ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ದಾವೆ ದಾಖಲಿಸದಂತೆ ನಿರ್ಬಂಧ ವಿಧಿಸಿದೆ.

ಪ್ರಕರಣದ ಹಿನ್ನೆಲೆ :ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಅವರ ನೇತೃತ್ವದ ಹಶಮ್ ಇನ್ವೆಸ್ಟ್ಮೆಂಟ್ ಅಂಡ್ ಟ್ರೇಡಿಂಗ್ ಕಂಪನಿ ಮತ್ತು ವಿಪ್ರೋ ಹಣಕಾಸು ಅವ್ಯವಹಾರದಲ್ಲಿ ತೊಡಗಿವೆ ಎಂದು ಆರೋಪಿಸಿದ್ದ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್​​​ಫರೆನ್ಸಿ ತನಿಖೆ ನಡೆಸಲು ಕೋರಿ ರಿಟ್ ಅರ್ಜಿಗಳನ್ನು ಸಲ್ಲಿಸಿತ್ತು. ಅರ್ಜಿಗಳನ್ನು ಒಮ್ಮೆ ವಜಾಗೊಳಿಸಿದ ನಂತರವೂ ಅರ್ಜಿಗಳನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ ಡಿಸೆಂಬರ್​​ನಲ್ಲಿ ₹10 ಲಕ್ಷ ದಂಡ ವಿಧಿಸಿತ್ತು.

ಆ ಬಳಿಕ ಅಜೀಂ ಪ್ರೇಮ್ ಜಿ ಹೈಕೋರ್ಟ್‌ನಲ್ಲಿಯೇ ದೂರುದಾರರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ನ್ಯಾಯಾಲಯದ ಸಮಯ ಹಾಳು ಮಾಡಿದಕ್ಕೆ ಹಾಗೂ ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 12(1) ಅಡಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Last Updated : Jan 17, 2022, 5:41 PM IST

ABOUT THE AUTHOR

...view details