ಬೆಂಗಳೂರು: ರಾಜ್ಯದಿಂದ ವಿದೇಶಕ್ಕೆ ಕಬ್ಬಿಣದ ಅದಿರು ರಪ್ತು ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಸುಪ್ರೀಂಕೋರ್ಟ್ನಲ್ಲಿ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ಮೇಲ್ಮನವಿ ಅರ್ಜಿ ಹಾಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ತೀರ್ಮಾನಿಸಿದೆ. ಉನ್ನತಾಧಿಕಾರಿಗಳ ಸಮಿತಿ (ಸಿಇಸಿ )ಯ ಅಭಿಪ್ರಾಯ ಪಡೆದು ಕಬ್ಬಿಣದ ಅದಿರು ರಪ್ತು ಮಾಡಲು ವಿಧಿಸಿರುವ ನಿಷೇಧವನ್ನು ತೆರವು ಮಾಡುವಂತೆ ಮನವಿ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಇಂದು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿದ ನಂತರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ವಿದೇಶಕ್ಕೆ ರಪ್ತು ಮಾಡುವ ಸಂಬಂಧ ಅಭಿಪ್ರಾಯ ಕೇಳಲಾಗಿತ್ತು. ಕರ್ನಾಟಕದಿಂದ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಪ್ತು ಮಾಡುವ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.
ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಾತನಾಡಿದರು ದೇಶದ ಯಾವುದೇ ರಾಜ್ಯಗಳಲ್ಲೂ ವಿದೇಶಕ್ಕೆ ಕಬ್ಬಿಣದ ಅದಿರು ರಪ್ತು ಮಾಡಲು ನಿಷೇಧ ಹೇರಿಲ್ಲ. ಕರ್ನಾಟಕದಲ್ಲಿ ಮಾತ್ರ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ವರಮಾನವು ನಿಂತು ಹೋಗಿದೆ ಎಂದರು.
ಕೇಂದ್ರ ಸರ್ಕಾರವು ನಮಗೆ ಸಂಪೂರ್ಣವಾದ ಸಹಕಾರ ನೀಡುತ್ತಿದೆ. ನ್ಯಾಯಾಲಯದಲ್ಲಿ ಕಾನೂನಿನ ನೆರವು ನೀಡುವುದಾಗಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ನಮ್ಮ ನಿಲುವನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಲು ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಹೆಚ್ಚಿನ ವರಮಾನ ತಂದುಕೊಡುವ ಪ್ರಮುಖ ಮೂಲವು ಇದಾಗಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಮನವರಿಕೆ ಮಾಡಿಕೊಟ್ಟೆವು. ರಾಜ್ಯದ ನಿಲುವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು.
ಅದಿರು ರಪ್ತು ಮಾಡುವ ಸರ್ಕಾರದ ನಿಲುವನ್ನು ಸಿಇಸಿಯವರೆಗೂ ಮನವರಿಕೆ ಮಾಡಿಕೊಡಲಾಗುವುದು. ಕಾನೂನಿನ ಇತಿಮಿತಿಯಲ್ಲೇ ಮಾಡಲಿದ್ದೇವೆ ಎಂದು ಪುನರುಚ್ಚರಿಸಿದರು. ದಿನದ 24 ಗಂಟೆಯವರೆಗೆ ಮೈನಿಂಗ್ ಅವಕಾಶ ಇದೆ. ಸಾಗಾಣಿಕೆಗೆ ಮಾತ್ರ 12 ಗಂಟೆ ಇದೆ. ಇದರಿಂದ ನಮ್ಮ ಕಾರ್ಖಾನೆಯವರಿಗೆ ಸಮಸ್ಯೆಯಾಗಿದೆ ಎಂದು ಮನವಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಣೆ ನೀಡಿದರು.
ಗಣಿ ಕಂಪನಿಗಳಿಂದ ಸಂಗ್ರಹಣೆ ಮಾಡಿರುವ ರಾಯಲ್ಟಿ ಹಣವೂ ಸುಪ್ರೀಂಕೋರ್ಟ್ ನಲ್ಲಿದೆ. ಇದನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಬಹುದು. ಇದನ್ನು ರಾಜ್ಯಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ 35 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತದೆ. 2030 ರ ವೇಳೆಗೆ ಇದನ್ನು 70 ದಶಲಕ್ಷ ಮೆಟ್ರಿಕ್ ಟನ್ಗೆ ಕೊಂಡೊಯ್ಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಚಿವ ನಿರಾಣಿ ತಿಳಿಸಿದರು.
ಹೊಸದಾಗಿ 100 ಮೈನಿಂಗ್ ಮಾಡುವ ಗುರಿ: 100 ಮೈನಿಂಗ್ ಹೊಸದಾಗಿ ಮಾಡುವ ಬಗ್ಗೆ ಗುರಿ ಹೊಂದಲಾಗಿದೆ. 3 ಸಾವಿರ ಅಜಿ೯ಗಳು ಬಂದಿವೆ. ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು. ಆತ್ಮ ನಿರ್ಭರ್ ಅಡಿಯಲ್ಲಿ 500 ಮೈನಿಂಗ್ ಮಾಡಲು ನಿರ್ದೇಶನ ಮಾಡಲಾಗಿದೆ. ಎರಡು ವರ್ಷದಲ್ಲಿ 100 ಮೈನಿಂಗ್ ಮಾಡಲು ಕ್ರಮ ವಹಿಸುತ್ತೇವೆ. ರಾಜ್ಯದಲ್ಲಿ ಮೈನಿಂಗ್ ಸಂಪನ್ಮೂಲ ಚೆನ್ನಾಗಿದೆ. ಗೋಲ್ಡ್ ಮೈನಿಂಗ್ ರಾಜ್ಯದಲ್ಲಿ ಚೆನ್ನಾಗಿದೆ. ಖನಿಜ ಸಂಪತ್ತನ್ನು ಉಪಯೋಗಿಸಿಕೊಳ್ಳಲು ಸಲಹೆ ಬಂದಿದೆ. ಕೋಲಾರದ ಕೆಜಿಎಫ್ ಚಿನ್ಮದ ಗಣಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಾಗತಿಕ ಟೆಂಡರ್ : ರಾಜ್ಯದಲ್ಲಿ ಒಟ್ಟು ಎಷ್ಟು ಪ್ರಮಾಣದಲ್ಲಿ ಅದಿರು ಇದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯುತ್ತಿಲ್ಲ. ಹೀಗಾಗಿ ಇದನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಇಲಾಖೆ ತೀಮಾ೯ನಿಸಿದೆ ಎಂದು ಹೇಳಿದರು. ಎಲ್ಲಿ ಎಷ್ಟು ಪ್ರಮಾಣದಲ್ಲಿದೆ? ಇದರ ಗುಣಮಟ್ಟ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಮೀಕ್ಷೆ ನಡೆಸುತ್ತೇವೆ ಎಂದು ಸಚಿವರು ತಿಳಿಸಿದರು.
ಓದಿ:ಹೆಚ್. ಎಸ್ ದೊರೆಸ್ವಾಮಿ ನಿಧನಕ್ಕೆ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಸಂತಾಪ