ಬೆಂಗಳೂರು:ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧಿಸಿದ್ದಕ್ಕಾಗಿ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 7ಕ್ಕೂ ಹೆಚ್ಚು ವಿಚಾರವಾದಿ ಸಂಘಟನೆಗಳ ಕಾರ್ಯಕರ್ತರು ಹಾಗೂ ಪ್ರತಿನಿಧಿಗಳು ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ವಿಚಾರಣೆ ಮತ್ತು ಬಂಧನದ ಕುರಿತು ಬೆಂಗಳೂರು ಮತ್ತು ದೆಹಲಿ ಪೊಲೀಸರ ನಡುವಿನ ಪತ್ರ ವ್ಯವಹಾರದ ಪ್ರತಿಗಳನ್ನು ಒದಗಿಸುವಂತೆ ಹಾಗೂ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರನ್ನು ಒತ್ತಾಯಿಸಿ ನಿಯೋಗ ಪತ್ರ ಸಲ್ಲಿಸಿತು. ನಗರ ಪೊಲೀಸರ ವಿರುದ್ಧ ಕೂಡ ಕ್ರಮ ಕೂಡ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಜನರ ಸಮಸ್ಯೆಗಳಿಗಾಗಿ ಹೋರಾಡುತಿದ್ದ ಕರ್ನಾಟಕದ ಯುವತಿಯಾಗಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಬಂಧಿಸಲಾಗಿದೆ. ಆಕೆಯ ವಕೀಲರಿಗೆ ಕೂಡ ಪ್ರವೇಶವನ್ನು ನಿರಾಕರಿಸಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಕೂಡ ಹಾಜರುಪಡಿಸಲಾಗಿಲ್ಲ. ಈ ಘಟನೆಗಳು ತೀವ್ರ ನೋವುಂಟು ಮಾಡಿವೆ ಎಂದು ಬೊಮ್ಮಾಯಿಗೆ ನಿಯೋಗ ತಿಳಿಸಿತು.
ಅನಿಲ್ ವಿಜ್ ವಿರುದ್ಧ ಕೂಡ ಎಫ್‌ಐಆರ್ ದಾಖಲು ಮಾಡುವಂತೆ ಕೋರಿಲಾಯಿತು. ಬೆಂಗಳೂರು ನಗರ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿತು. ಬೊಮ್ಮಾಯಿ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತಾ ಸಂಘ, ನಮ್ಮೂರ ಭೂಮಿ ನಮಗಿರಲಿ ಸಂಸ್ಥೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಅಖಿಲ ಭಾರತ ವಿದ್ಯಾರ್ಥಿ ಸಂಘ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ದ್ವೇಷ ಭಾಷಣದ ವಿರುದ್ಧ ಅಭಿಯಾನ ಕಾರ್ಯಕರ್ತರು ಮತ್ತು ವಕೀಲರನ್ನು ಒಳಗೊಂಡ ನಿಯೋಗ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ, ಬಂಧನದ ಬಗ್ಗೆ ಹಲವು ನ್ಯೂನತೆಗಳ ಬಗ್ಗೆ ವಿವರಿಸಿದರು. ನಿಯೋಗದ ಕಳವಳವನ್ನು ಅರ್ಥೈಸಿಕೊಂಡಿದ್ದೇನೆ ಎಂದು ಬೊಮ್ಮಾಯಿ ಹೇಳಿದರು. ಈ ಪ್ರಕರಣದ ಕುರಿತು ಚರ್ಚಿಸಲು ಎರಡು ದಿನಗಳಲ್ಲಿ ಅಡ್ವೊಕೇಟ್ ಜನರಲ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನೆಡೆಸುವುದಾಗಿ ಭರವಸೆ ನೀಡಿದರು.