ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ತಡೆಗಟ್ಟಲು ಹೆಚ್ಚು ಲಸಿಕೆ ಪೂರೈಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಕರ್ನಾಟಕ ಸೇರಿದಂತೆ 11 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡ ಸಚಿವರು, ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ವಿವರಿಸಿದರು. ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಂಡ ಕ್ರಮ, ಪರೀಕ್ಷೆ ಹೆಚ್ಚಳ ಸೇರಿದಂತೆ ಕೋವಿಡ್ 2 ನೇ ಅಲೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕೆಲ ಸಂದರ್ಭಗಳಲ್ಲಿ ಕಡಿಮೆ ಲಸಿಕೆಯಿಂದಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ನಿಧಾನ ಮಾಡಬೇಕಾಯಿತು. ಆದ್ದರಿಂದ ಕೇಂದ್ರದಿಂದ ಹೆಚ್ಚು ಲಸಿಕೆ ಲಭ್ಯವಾಗಿಸಬೇಕು. ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ಆಕ್ಸಿಜನ್ ಹೆಚ್ಚು ಉತ್ಪಾದನೆಯಾಗುವಂತೆ ಕ್ರಮ ವಹಿಸಬೇಕು. ಚಿತ್ರಮಂದಿರ, ಅಂತಾರಾಜ್ಯ ಪ್ರಯಾಣ, ಸಮಾರಂಭಗಳಲ್ಲಿ ಜನಸಂಖ್ಯೆ ಮಿತಿ ಮೊದಲಾದವುಗಳಲ್ಲಿ ದೇಶಾದ್ಯಂತ ಒಂದೇ ಮಾರ್ಗಸೂಚಿ ನೀಡಬೇಕು. ಇದರಿಂದಾಗಿ ಯಾವುದೇ ಗೊಂದಲ ಉಂಟಾಗುವುದಿಲ್ಲ. ನಿಯಮಗಳಲ್ಲಿ ದೇಶಾದ್ಯಂತ ಏಕರೂಪತೆ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲ ಕೋವಿಡ್ ಪೀಡಿತ ರಾಜ್ಯಗಳಿಗೆ ಒಂದೇ ರೀತಿಯ ನಿಯಮ ರೂಪಿಸಬೇಕು. ಇದರಿಂದಾಗಿ ಜನತೆಗೆ ಕೋವಿಡ್ನ ಗಂಭೀರ ಸ್ವರೂಪದ ಬಗ್ಗೆ ಅರಿವು ಬರಲಿದೆ ಎಂದು ಸಚಿವರು ಕೋರಿದರು.
ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 1.15 ಲಕ್ಷದಿಂದ 1.25 ಲಕ್ಷದಷ್ಟು ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಏಪ್ರಿಲ್ 5 ಗೆ ಅಂತ್ಯಗೊಂಡಂತೆ, 2,19,87,431 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 1,77,66,796 (ಶೇ.95) ಆರ್ ಟಿಪಿಸಿಆರ್ ಪರೀಕ್ಷೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ. 1.24 ರಷ್ಟಿದೆ. ಮಾಚ್ 1 ರಿಂದ ಈ ದರ ಶೇ. 0.47 ರಷ್ಟಿದೆ. ಬೆಂಗಳೂರಿನಲ್ಲಿ ಶೇ. 1.03 ರಷ್ಟು ದರವಿದ್ದು, ಮಾರ್ಚ್ 1 ರಿಂದ 0.42% ರಷ್ಟಿದೆ ಎಂದರು.
ಖಾಸಗಿ ಆಸ್ಪತ್ರೆಗಳಿಗೆ ಸೂಚನೆ : ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಟ್ಟು ಕ್ರಮ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಶೇ.20 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ. ಅಗತ್ಯ ಬಂದರೆ ಶೇ.50 ರಷ್ಟು ಮೀಸಲಿಡಬೇಕೆಂದೂ ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಜನರ ಮಿತಿಯನ್ನು 500 ಕ್ಕೆ ಹಾಗೂ ಮುಚ್ಚಿದ ಪ್ರದೇಶಗಳಲ್ಲಿ 200 ಕ್ಕೆ ಸೀಮಿತಗೊಳಿಸಲಾಗಿದೆ. 9 ನೇ ತರಗತಿಗೆ ಶಾಲೆ ನಡೆಸುವುದು ನಿರ್ಬಂಧಿಸಿದ್ದು, 10 ಹಾಗೂ ಪಿಯುಸಿಗೆ ತರಗತಿ ನಡೆಸುವ ಆಯ್ಕೆ ಮಾತ್ರ ನೀಡಲಾಗಿದೆ. ಬೋರ್ಡಿಂಗ್ ಶಾಲೆ, ಹಾಸ್ಟೆಲ್ ಗಳನ್ನು ಬಂದ್ ಮಾಡಲಾಗಿದೆ. ಉನ್ನತ ವ್ಯಾಸಂಗದ ತರಗತಿಗಳನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.
ಅಪಾರ್ಟ್‍ಮೆಂಟ್ ಗಳಲ್ಲಿ ಜಿಮ್, ಈಜುಕೊಳ ಬಳಕೆ ನಿರ್ಬಂಧಿಸಲಾಗಿದೆ. ಜಿಮ್ ಗಳಲ್ಲಿ ಶೇ.50 ರಷ್ಟು ಮಂದಿ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಗುಂಪುಗೂಡುವುದನ್ನು ತಡೆಯಲು ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಎಂಟು ಜಿಲ್ಲೆಗಳಲ್ಲಿ ಬಾರ್, ಪಬ್ ಗಳಲ್ಲಿ ಶೇ. 50 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಸಾರಿಗೆ ನೌಕರರ ಮುಷ್ಕರ: ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ
ಪರೀಕ್ಷೆ ಕುರಿತು ಮೆಚ್ಚುಗೆ : ಸಭೆ ಬಳಿಕ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಿದ್ದು, ಕೊರೊನಾ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಬಹುದು. ಹಿಂದಿನ ವರ್ಷ ಮರಣ ಪ್ರಮಾಣ ಶೇ. 1.24 ಪ್ರಮಾಣವಿದ್ದು, ಈಗ ಶೇ. 0.6 ಆಗಿದೆ. ನಿನ್ನೆ 32 ಸಾವಾಗಿದ್ದರೆ, ಇಂದು 38 ಸಾವುಗಳಾಗಿವೆ. ಆದರೆ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಜನರಿಗೆ ಪರೀಕ್ಷೆ ಮಾಡಿರುವುದಕ್ಕೆ ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ. ಅಲ್ಲದೇ ಇದರಲ್ಲಿ ಶೇ.95 ರಷ್ಟು ಆರ್ ಟಿಪಿಸಿಆರ್ ಮಾಡಲಾಗಿದೆ. ಬೇರೆ ಯಾವ ರಾಜ್ಯವೂ ಇಷ್ಟೊಂದು ಪರೀಕ್ಷೆ ಮಾಡಿಲ್ಲ. ಹೆಚ್ಚು ಪರೀಕ್ಷೆ ಮಾಡಿ, ಸಂಪರ್ಕಿತರನ್ನು ಪತ್ತೆ ಮಾಡಿದರೆ ಸಾವಿನ ಸಂಖ್ಯೆ ಇಳಿಸಬಹುದು ಎಂದು ಮಾಹಿತಿ ನೀಡಿದರು.
ಜನರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸದಿದ್ದರೆ ಸೋಂಕು ಹೆಚ್ಚಾಗುತ್ತದೆ. ಆಗ ನೈತಿಕ ಹೊಣೆಯನ್ನು ಯಾರು ಹೊರಬೇಕೆಂಬ ಪ್ರಶ್ನೆ ಬರುತ್ತದೆ ಎಂದು ಕೇಂದ್ರ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಕೂಡ ಬರುವ ನಿರೀಕ್ಷೆ ಇದೆ. ಸೋಂಕು ಹೆಚ್ಚಾಗಿರುವುದರಿಂದ ನಿಖರ ಮಾರ್ಗಸೂಚಿ ನೀಡುವ ಕೆಲಸ ಮಾಡಲಿದ್ದಾರೆ. ಹೆಚ್ಚು ಲಸಿಕೆ ನೀಡಿರುವುದಕ್ಕೆ ಕೂಡ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಹೆಚ್ಚು ಆಕ್ಸಿಜನ್ ಘಟಕ ಅಳವಡಿಕೆ ಕೇಂದ್ರದ ಸಹಕಾರ ಕೋರಿದ್ದೇನೆ. ಅದಕ್ಕೆ ಪೂರಕವಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಹಾಸಿಗೆ ಲಭ್ಯತೆ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದರು.ಮಹಾರಾಷ್ಟ್ರದ ಆರೋಗ್ಯ ಸಚಿವರು ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅವರು ಕೇಂದ್ರಕ್ಕೆ ಕೋರಿದ್ದಾರೆ. ನಮ್ಮಲ್ಲಿ ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 9 ರಷ್ಟು ಆಗಿದೆ. ಹೀಗಾಗಿ ಕೆಲ ಕ್ರಮಗಳು ಬಹಳ ಅಗತ್ಯ ಎಂದು ಹೇಳಿದರು.
ಈಗ ಮುಷ್ಕರ ನಡೆಸುವುದು ದುರದೃಷ್ಟ:ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಮುಷ್ಕರ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಒಪ್ಪಲು ಸಾಧ್ಯವಿಲ್ಲ. ಇದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಹಕ್ಕು ಇದೆ. ಆದರೆ ಸಮಯ, ಸಂದರ್ಭ ನೋಡಬೇಕು. 9 ರಲ್ಲಿ 8 ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಒಂದು ಬೇಡಿಕೆಗಾಗಿ ಯಾರದ್ದೋ ಕುಮ್ಮಕ್ಕಿನಿಂದ ಹೀಗೆ ಮಾಡಬಾರದು. ಅದನ್ನು ಚರ್ಚೆ ಮೂಲಕ ಬಗೆಹರಿಸಬಹುದು. ಮುಖ್ಯಮಂತ್ರಿಗಳು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ತಾಳ್ಮೆ ಅಗತ್ಯ ಎಂದು ಹೇಳಿದರು.