ಬೆಂಗಳೂರು :ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅಗತ್ಯ ಮಂಜೂರಾತಿ ಕೊಡಿಸುವಂತೆ ಜಲಸಂಪನ್ಮೂಲ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಮನವಿ ಮಾಡಲಾಗಿದೆ. ಜೊತೆಗೆ ಕಾವೇರಿ ವಿಚಾರ ಸೇರಿದಂತೆ ನೀರಾವರಿ ಸಮಸ್ಯೆಗಳನ್ನು ಪರಿಹರಿಸಬೇಕಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಗ್ಗೆ ಗಮನಹರಿಸಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮನವಿ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸ್ಥಾಯಿ ಸಮಿತಿಯ ಮುಂದೆ ಕಾವೇರಿ ಕಣಿವೆಯಲ್ಲಿ ರಾಜ್ಯಕ್ಕೆ ಹಾಗೂ ರೈತರಿಗೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲಾಗಿದೆ. ಮೇಕೆದಾಟು ಯೋಜನೆಯು ನೀರಾವರಿ ಯೋಜನೆಯಲ್ಲ. ಕುಡಿಯುವ ನೀರಿನ ಯೋಜನೆಯಾಗಿರುವ ಕಾರಣ ಮಂಜೂರಾತಿ ನೀಡಬೇಕು. ಕಾವೇರಿ ಕಣಿವೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಪರಿಹಾರದ ಬಗ್ಗೆ ಪ್ರಧಾನಿಯವರು ಮಧ್ಯಪ್ರವೇಶ ಮಾಡಬೇಕು. ಈ ಬಗ್ಗೆ ಈಗಾಗಲೇ ಮನವಿ ಕೂಡ ಮಾಡಲಾಗಿದೆ ಎಂದು ಹೇಳಿದರು.
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪರಿಹಾರ ಒದಗಿಸುವುದಾದರೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದ ಗೌಡರು, ಬೆಂಗಳೂರು ನಗರದ ಜನಸಂಖ್ಯೆ ಪ್ರಸ್ತುತ 1 ಕೋಟಿ 35 ಲಕ್ಷ ಇದ್ದು, 2044ರ ವೇಳೆಗೆ 3 ಕೋಟಿ ಜನಸಂಖ್ಯೆ ಆಗಬಹುದೆಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯವಿದೆ. ಕಾವೇರಿ ಕಣಿವೆಯ ಕೆಆರ್ಎಸ್, ಸಾರಂಗಿ, ಕಬಿನಿ, ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ಜೂನ್‍ನಿಂದ ಮೇ ನಡುವಿನ ಜಲವರ್ಷದಲ್ಲಿ 177.25 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು.